
ಯಳಂದೂರು: ಪರಿಸರ ಎಂಬುದು ಭೂಮಿಯ ಹುಟ್ಟಿನೊಂದಿಗೆ ಜನಿಸಿದ್ದು, ಅದರ ಮೇಲಿನ ಅತಿಯಾದ ಹಸ್ತಕ್ಷೇಪದಿಂದ ಜೀವಜಾಲದ ನಂಟು ಶಿಥಿಲವಾಗುತ್ತಿದೆ ಎಂದು ಮುಖ್ಯಮಂತ್ರಿ ಪದಕ ಪುರಸ್ಕೃತ ಉಪವಲಯ ಅರಣ್ಯಾಧಿಕಾರಿ ಸಂತೆಮರಹಳ್ಳಿ ಬಿ. ಅನಂತರಾಮು ಅಭಿಪ್ರಾಯ ಪಟ್ಟರು. ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಶನಿವಾರ ಸಂಜೆ ಗಾಯತ್ರಿ ಬಳಗದ ವತಿಯಿಂದ ಆಯೋಜಿಸಿದ್ದ ಜೈವಿಕ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಘಟಪ್ರದೇಶಗಳು ಮನುಕುಲಕ್ಕೆ ಅಗತ್ಯವಾದ ಜೀವ ವಾಯುವನ್ನು ಪೂರೈಸುತ್ತಿದ್ದು,ನೂರಾರು ವನ್ಯ ಜೀವಿಗಳು, ವ್ಯಾಘ್ರಗಳು ಹಾಗೂ ಆನೆಗಳಿಗೆ ಆಶ್ರಯಯವಾಗಿವೆ ಎಂದು ಹೇಳಿದರು. ಅಪರೂಪದ ಸಸ್ಯವರ್ಗಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮುಂದಿನ ಪೀಳಿಗೆಗೆ ಜೀವ ಜಗತ್ತಿನ ಮಹತ್ವ ಹಾಗೂ ಪರಿಸರ ಸಂರಕ್ಷಣೆ ಅರಿವು ಮೂಡಿಸುವ ಕಾರ್ಯವು ಈಗಿನಿಂದಲೇ ಆರಂಭವಾಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಗಾಯಿತ್ರಿ ಬಳಗದ ವತಿಯಿಂದ ಅನಂತ ರಾಮು ಅವರನ್ನು ಅಭಿನಂದಿಸಲಾಯಿತು. ಗಾಯತ್ರಿ ಬಳಗದ ಅಧ್ಯಕ್ಷ ರಘುನಾಥ್, ಉಪಾಧ್ಯಕ್ಷ ಪಣೀಶ್, ನಾರಾಯಣರಾವ್, ಕಾರ್ಯದರ್ಶಿ ಕೆ ಶ್ರೀಧರ್, ಪ್ರಕಾಶ್, ಸೇತು ಹಾಗೂ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.




