
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ನೌಕರರ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ನ್ಯಾ. ಸೂರಜ್ ಗೋವಿಂದರಾಜ್ ಮತ್ತು ನ್ಯಾ. ಕೆ. ಮನ್ಮಥರಾವ್ ಅವರಿದ್ದ ಪೀಠವು ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿಭಟನೆ ನಡೆಸದಂತೆ ಮಧ್ಯಂತರ ತಡೆ ನೀಡಿದೆ ಹಾಗೂ ಸರ್ಕಾರ ಮತ್ತು ಸಾರಿಗೆ ಸಂಘಟನೆಗಳು ಮಾತುಕತೆ ನಡೆಸಬೇಕೆಂದು ಸೂಚಿಸಿದೆ. ಸಾರಿಗೆ ನೌಕರರ ಮುಷ್ಕರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ PIL ಅರ್ಜಿಯನ್ನು ವಿಚಾರಣೆ ಮಾಡಿದ ಹೈಕೋರ್ಟ್, ಈಗಾಗಲೇ ಶೇ.12.5 ಹೆಚ್ಚಳ ನೀಡಲಾಗಿದೆ ಎಂದು ಉಲ್ಲೇಖಿಸಿ, ಯಾವಾಗ ಸಭೆ ನಡೆಸುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿತು ಹಾಗೂ ಮುಷ್ಕರ ಬದಲು ಸಂವಾದ ನಡೆಸುವಂತೆ ಸೂಚನೆ ನೀಡಿತು. ಈ ಅರ್ಜಿಯನ್ನು ಕೆಲಸದ ಮಹಿಳೆ ಮತ್ತು ಕಟ್ಟಡ ಕಾರ್ಮಿಕರು ಸಲ್ಲಿಸಿದ್ದು, ಅವರ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ್ ವಾದ ಮಂಡಿಸಿದರು. ಇತ್ತ ಸಾರಿಗೆ ನೌಕರರ ಪರ ಕ್ಲಿಫ್ಟನ್ ರೋಜಾರಿಯೋ ಅವರು ತಮ್ಮ ಬೇಡಿಕೆಗಳನ್ನು ಸರಿಯಾಗಿ ಪರಿಗಣಿಸಲಾಗುತ್ತಿಲ್ಲ ಎಂದು ವಾದಿಸಿದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತಾತ್ಕಾಲಿಕವಾಗಿ ಮುಷ್ಕರಕ್ಕೆ ತಡೆ ನೀಡಿದ್ದು, ಸರ್ಕಾರ ಹಾಗೂ ಸಾರಿಗೆ ಸಂಘಟನೆಗಳಿಗೆ ನೋಟಿಸ್ ಜಾರಿಗೊಳಿಸಿ ಸಾರಿಗೆ ಸಚಿವರು ಹಾಗೂ ಸಂಬಂಧಿತ ಕಾರ್ಯದರ್ಶಿಗಳೊಂದಿಗೆ ಜಂಟಿ ಕ್ರಿಯಾ ಸಮಿತಿ ಸಭೆ ನಡೆಸುವಂತೆ ಸೂಚಿಸಿದೆ. ಜೊತೆಗೆ ಗುರುವಾರಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಲಾಗಿದೆ.




