
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆ. ತಲಗೂರು ಗ್ರಾಮದಲ್ಲಿ ಮನೆ ಬಾಗಿಲಲ್ಲೇ ಸುಮಾರು 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ಪ್ರತ್ಯಕ್ಷವಾಗಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಗ್ರಾಮದ ಮಂಜುನಾಥ್ ಆಚಾರ್ ಅವರ ಮನೆಗೆ ತಂಪಾದ ನೆರಳು ಹುಡುಕಿಕೊಂಡು ಬಂದ ಈ ಹಾವು ಹೊಸ್ತಿಲಲ್ಲೇ ಮಲಗಿರುವುದನ್ನು ಬೆಳಿಗ್ಗೆ ಮನೆಯವರು ಗಮನಿಸಿ ಭಯಭೀತರಾಗಿದ್ದಾರೆ. ಕೂಡಲೇ ಗ್ರಾಮಸ್ಥರು ಉರಗ ತಜ್ಞ ಸ್ನೇಕ್ ಆರೀಫ್ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಜಾಗರೂಕತೆಯಿಂದ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ. ನಂತರ ಆ ಕಾಳಿಂಗ ಸರ್ಪವನ್ನು ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದ್ದು, ಯಾವುದೇ ಅಪಾಯವಿಲ್ಲದೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.



