ದಕ್ಷಿಣಕನ್ನಡ: ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುವ ಮೂರು ದಿನಗಳ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಚೌತಿ, ಪಂಚಮಿ ಮತ್ತು ಷಷ್ಠಿಯಂದು ಭಕ್ತರು ಎಡೆಮಡೆಸ್ನಾನ ಹಾಗೂ ಉರುಳುಸೇವೆ ನೆರವೇರಿಸುತ್ತಾರೆ. ವರ್ಷದ ಈ ದಿನಗಳಲ್ಲಿ ಮಾಡಬಹುದಾದ ಈ ಸೇವೆಯಿಂದ ಆರೋಗ್ಯ ಮತ್ತು ಚರ್ಮ ರೋಗಗಳು ಗುಣವಾಗುತ್ತದೆ ಎಂಬ ನಂಬಿಕೆ ಗಟ್ಟಿಯಾಗಿದ್ದು, ಅನಾದಿಕಾಲದಿಂದ ಇದು ಕ್ಷೇತ್ರದ ವಿಶೇಷ ಪದ್ಧತಿಯಾಗಿ ಉಳಿದುಬಂದಿದೆ. ಹಿಂದೆ ಬ್ರಾಹ್ಮಣರು ತಿಂದ ಎಂಜಲು ಎಲೆಯ ಮೇಲೇ ಉರುಳು ಸೇವೆ ನಡೆಸಲಾಗುತ್ತಿದ್ದು ನಂತರ ಅನೇಕರಿಂದ ವಿರೋಧ ವ್ಯಕ್ತವಾದ ಬಳಿಕ ಈಗ ದೇವರ ನೈವೇದ್ಯವನ್ನು ಗೋವುಗಳಿಗೆ ಬಡಿಸಿದ ಬಳಿಕ ಅವು ತಿಂದ ಬಾಳೆ ಎಲೆಗಳ ಮೇಲೆ ಭಕ್ತರು ಉರುಳುವ ವಿಧಾನ ಜಾರಿಯಲ್ಲಿದ್ದು ಸ್ವಇಚ್ಛೆಯಿಂದ ಮಾಡುವ ಈ ಸೇವೆಗೆ ದೇವಸ್ಥಾನ ಯಾವುದೇ ರಶೀದಿ ನೀಡುವುದಿಲ್ಲ ಸೇವೆ ಮುಗಿಸಿದ ಬಳಿಕ ಭಕ್ತರು ದರ್ಪಣ ತೀರ್ಥದಲ್ಲಿ ಸ್ನಾನ ಮಾಡಿ ಸುಬ್ರಮಣ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಆಚರಣೆಯಾಗಿದೆ.
