
ಮೂಡಿಗೆರೆ: ಹೊಯ್ಸಳ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ಕ್ರಿಯೇಟಿವ್ ಮೈಂಡ್ಸ್ ಯೂತ್ ಅಸೋಸಿಯೇಷನ್ಗಳ ಸಂಯುಕ್ತಾಶ್ರಯದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ರಾಘವೇಂದ್ರ ಕೆಸವಳಲು, ದಸರಾ ಕ್ರೀಡಾಕೂಟಕ್ಕೆ ಹಲವು ವರ್ಷಗಳ ಇತಿಹಾಸವಿದ್ದು, ಪ್ರತಿಭಾವಂತ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸುತ್ತಿದೆ, ಕ್ರೀಡಾಪಟುಗಳು ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ತೀರ್ಪುಗಾರರ ನಿರ್ಣಯಗಳಿಗೆ ಬದ್ಧರಾಗಬೇಕು ಎಂದು ಹೇಳಿದರು. ಈ ಭಾಗದ ಕ್ರೀಡಾಪಟುಗಳಿಗೆ ಮೈಸೂರು ದಸರಾದಲ್ಲೂ ಪಾಲ್ಗೊಳ್ಳುವ ಅವಕಾಶವಿದ್ದು, ನಿರಂತರ ಪ್ರಯತ್ನದಿಂದ ಅವಕಾಶ ಪಡೆಯಬಹುದು ಎಂದರು. ಕೆಡಿಪಿ ನಾಮನಿರ್ದೇಶಕ ಕೆ.ಎ. ರವಿ ಕುನ್ನಳ್ಳಿ ಮಾತನಾಡಿ, ಗ್ರಾಮೀಣ ಪ್ರತಿಭೆಗಳಿಗೆ ಇಂತಹ ಕ್ರೀಡಾಕೂಟಗಳು ವೇದಿಕೆಯಾಗಲಿದ್ದು, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಜೊತೆಗೆ ಶಿಸ್ತು ಮತ್ತು ಸಂಯಮ ಬೆಳೆಸಿಕೊಳ್ಳಬಹುದು ಎಂದರು. ಕಸಾಪ ಅಧ್ಯಕ್ಷ ಲಕ್ಷ್ಮಣಗೌಡ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಕ್ರಿಯೇಟಿವ್ ಮೈಂಡ್ಸ್ ಯೂತ್ ಅಧ್ಯಕ್ಷ ಮನೋಜ್ ಕುಮಾರ್ ಸ್ವಾಗತಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಲವೀನ ಸಿಲ್ವಿಯ ಲೋಬೋ ಅಧ್ಯಕ್ಷತೆ ವಹಿಸಿ ಕ್ರೀಡಾಕೂಟ ಉದ್ಘಾಟಿಸಿದರು. ಇದೇ ವೇಳೆ ಹೊಯ್ಸಳ ಕ್ರೀಡಾಂಗಣದಲ್ಲಿ ಬಟ್ಟೆ ಬದಲಾಯಿಸಲು ಕೊಠಡಿ ಇಲ್ಲದಿರುವುದು, ಶೌಚಾಲಯದ ಅವ್ಯವಸ್ಥೆ ಹಾಗೂ ಬಸ್ ನಿಲ್ದಾಣದ ಟಾಯ್ಲೆಟ್ ನೀರು ಮೈದಾನಕ್ಕೆ ಹರಿದುಬರುತ್ತಿರುವುದರಿಂದ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಶಾಸಕಿ ನಯನಾ ಮೋಟಮ್ಮ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ರಾಘವೇಂದ್ರ ಕೆಸವಳಲು ತಿಳಿಸಿದರು.




