
ಚಿಕ್ಕಮಗಳೂರು: ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮಳಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ರೈತರು 12 ಕಿ.ಮೀ. ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಆದಿಚುಂಚನಗಿರಿ ಶಾಖಾ ಮಠದ ಶೃಂಗೇರಿಯ ಗುಣನಾಥ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ, ರೈತರ ಬದುಕನ್ನೇ ಹಸನು ಮಾಡಬಲ್ಲ ಬಹುಪಯೋಗಿ ಮಳಲೂರು ಏತ ನೀರಾವರಿ ಯೋಜನೆ ಸುಮಾರು 25ರಿಂದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಜನೆಯ ಶೇಕಡ 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕಳೆದ ಮೂರು ದಶಕಗಳಲ್ಲಿ ಸುಮಾರು 25ರಿಂದ 30 ಕೋಟಿ ರೂಪಾಯಿ ವೆಚ್ಚವಾದರೂ ಯೋಜನೆ ಮಾತ್ರ ಕಾರ್ಯರೂಪಕ್ಕೆ ಬಂದಿಲ್ಲ ಎನ್ನಲಾಗಿದೆ. ಇದೀಗ ಯೋಜನೆ ಜಾರಿಗೆ ಮತ್ತೆ 21 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಯಗಚಿ ಡ್ಯಾಂನ ನೀರನ್ನು ಕಾಲುವೆ ಮೂಲಕ ನೀರಿನ ಟ್ಯಾಂಕ್ಗೆ ಲಿಫ್ಟ್ ಮಾಡಿ, ಅಲ್ಲಿಂದ ಕಂಬಿಹಳ್ಳಿ, ತಗಡೂರು ಹಾಗೂ ಬಿಗ್ಗನಹಳ್ಳಿ ಸೇರಿದಂತೆ 25ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ಒದಗಿಸುವ ಉದ್ದೇಶ ಹೊಂದಿದೆ. ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆಯ ಅಂಬಳೆ ಹೋಬಳಿಯ ಗ್ರಾಮಗಳ ಜನರು, ಜಾನುವಾರುಗಳು ಹಾಗೂ ಕೃಷಿಗೆ ಈ ಯೋಜನೆಯಿಂದ ಅನುಕೂಲವಾಗಲಿದ್ದು, ಮೂರು ದಶಕಗಳಿಂದ ಯೋಜನೆ ಜಾರಿಗೆ ಹೋರಾಡುತ್ತಿರುವ ರೈತರು ಇದೀಗ ಪಾದಯಾತ್ರೆಯ ಮೂಲಕ ತಮ್ಮ ಆಗ್ರಹವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.




