
ವಿದೇಶದಲ್ಲಿ ಅಧಿಕ ಸಂಬಳದ ಉದ್ಯೋಗದ ಆಮಿಷಕ್ಕೆ ಒಳಗಾಗಿ ಮಯನ್ಮಾರ್ನ ಚೀನಿ ಸೈಬರ್ ಗ್ಯಾಂಗ್ ಕೈಗೆ ಸಿಲುಕಿದ್ದ ಕರ್ನಾಟಕದ ಇಬ್ಬರು ಯುವಕರನ್ನು ಕರ್ನಾಟಕ ಸೈಬರ್ ಕಮಾಂಡ್, ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ (I4C), ಜಾರಿ ನಿರ್ದೇಶನಾಲಯ (ED), ಭಾರತೀಯ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯಾಚರಣೆಯ ಮೂಲಕ ಯಶಸ್ವಿಯಾಗಿ ರಕ್ಷಿಸಿ ತಾಯ್ನಾಡಿಗೆ ಕರೆತರಲಾಗಿದೆ. ಥೈಲ್ಯಾಂಡ್ನಲ್ಲಿ ಡೇಟಾ ಎಂಟ್ರಿ ಮತ್ತು ಕಂಪ್ಯೂಟರ್ ಸಂಬಂಧಿತ ಹೆಚ್ಚಿನ ಸಂಬಳದ ಉದ್ಯೋಗ ನೀಡುವುದಾಗಿ ನಕಲಿ ಏಜೆಂಟರು ಆಮಿಷ ಒಡ್ಡಿ, ಬಳಿಕ ಅಕ್ರಮವಾಗಿ ಗಡಿ ದಾಟಿಸಿ ಮಯನ್ಮಾರ್ನಲ್ಲಿರುವ ಚೀನಿ ಸೈಬರ್ ಸ್ಕ್ಯಾಮ್ ಕೇಂದ್ರಕ್ಕೆ ಕರೆದೊಯ್ದು ಅವರ ಪಾಸ್ಪೋರ್ಟ್ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು ಜಾಗತಿಕ ಮಟ್ಟದ ಆನ್ಲೈನ್ ಸೈಬರ್ ವಂಚನೆ ಮತ್ತು ಕ್ರಿಪ್ಟೋ ಸ್ಕ್ಯಾಮ್ಗಳಲ್ಲಿ ತೊಡಗುವಂತೆ ಒತ್ತಾಯಿಸಿದ್ದು, ನಿರಾಕರಿಸಿದರೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸಂತ್ರಸ್ತರು ತಮ್ಮ ಕುಟುಂಬಸ್ಥರನ್ನು ಸಂಪರ್ಕಿಸಿದ ಬಳಿಕ ಭಾರತೀಯ ರಾಯಭಾರ ಕಚೇರಿ ಹಾಗೂ ಸಂಬಂಧಿತ ಸಂಸ್ಥೆಗಳು ತ್ವರಿತ ಕಾರ್ಯಾಚರಣೆ ನಡೆಸಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿವೆ. ಈ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಹೆಚ್ಚಿನ ಸಂಬಳದ ಉದ್ಯೋಗದ ಹೆಸರಿನಲ್ಲಿ ಮೋಸ ಮಾಡುವ ನಕಲಿ ಏಜೆಂಟರ ಬಗ್ಗೆ ಯುವಜನರು ಎಚ್ಚರಿಕೆ ವಹಿಸಬೇಕು ಹಾಗೂ ಅಧಿಕೃತ ಸಂಸ್ಥೆಗಳ ಮೂಲಕವೇ ಉದ್ಯೋಗದ ಮಾಹಿತಿಯನ್ನು ಪರಿಶೀಲಿಸಿ ವಿದೇಶಕ್ಕೆ ತೆರಳಬೇಕು ಎಂದು ಕರ್ನಾಟಕ ಸೈಬರ್ ಕಮಾಂಡ್ ಡಿಜಿಪಿ ಪ್ರಣಬ್ ಮೊಹಾಂತಿ ಮನವಿ ಮಾಡಿದ್ದಾರೆ.



