
ಚಿಕ್ಕಮಗಳೂರು: ಬಾಳೆಹೊನ್ನೂರಿನಲ್ಲಿ ರೈತರೊಂದಿಗೆ ಸಭೆ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್, ಮಲೆನಾಡು-ಕರಾವಳಿ ಭಾಗಕ್ಕೆ ವಿಶೇಷ ಪ್ಯಾಕೇಜ್ ರೂಪಿಸಿದ್ದು, 320 ಕಿ.ಮೀ ವ್ಯಾಪ್ತಿಗೆ ವಿಶೇಷ ಪಾಲಿಸಿ ತರಲಾಗಿದೆ ಎಂದರು. ಮಲೆನಾಡಿನ ಜನರು ವಲಸೆ ಹೋಗುವುದನ್ನು ತಪ್ಪಿಸಿ ಸ್ಥಳೀಯವಾಗಿಯೇ ಉದ್ಯೋಗ ಸಿಗುವಂತೆ ಹೊಸ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು. ಅರಣ್ಯ ಇಲಾಖೆ ಕಾಟ, ಭೂಮಿ, ಲೀಸ್ ಹಾಗೂ ಎಕೋ ಸೆನ್ಸಿಟಿವ್ ಜೋನ್ ವಿಚಾರಗಳ ಕುರಿತು ರೈತರ ಸಮಸ್ಯೆಗಳನ್ನು ಆಲಿಸಿದ್ದು, ಇದೇ 27ರೊಳಗೆ ಅಧಿಕಾರಿಗಳು ವರದಿ ನೀಡುವಂತೆ ಸೂಚಿಸಿರುವುದಾಗಿ ತಿಳಿಸಿದರು. ಹೊಸದಾಗಿ ಯಾರೂ ಒತ್ತುವರಿ ಮಾಡಿಕೊಳ್ಳಬಾರದು, ಈಗಿರುವ ಜಮೀನನ್ನು ಭದ್ರವಾಗಿ ಇಟ್ಟುಕೊಳ್ಳಿ, ರೈತರಿಗೆ ಅನಗತ್ಯ ತೊಂದರೆ ಅಥವಾ ನೋಟಿಸ್ ನೀಡದಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದೇನೆ ಎಂದರು. ಲೀಸ್ ವಿಚಾರದಲ್ಲಿ 25 ವರ್ಷಗಳ ಅವಧಿ ನೀಡುವ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು. ಎಕೋ ಸೆನ್ಸಿಟಿವ್ ಜೋನ್ ಕೈಬಿಡುವಂತೆ ರೈತರು ಮನವಿ ಮಾಡಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಕೇಂದ್ರಕ್ಕೆ ವರದಿ ನೀಡಲಾಗುವುದು ಎಂದು ಹೇಳಿದರು. ಮಳೆಗಾಗಿ ಪ್ರಾರ್ಥನೆ ಮಾಡಿದ್ದು, ಕಿಗ್ಗಾ ಋಷ್ಯಶೃಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಬೇಕೆಂಬ ಆಸೆ ಇದೆ ಎಂದು ಡಿಕೆಶಿ ತಿಳಿಸಿದರು. ಮುಂದಿನ ದಿನಗಳಲ್ಲಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲೂ ಸಚಿವ ಸಂಪುಟ ಸಭೆ ನಡೆಸುವುದಾಗಿ ಘೋಷಿಸಿದ ಅವರು, ರೈತರ ಸಮಸ್ಯೆ ಹಾಗೂ ಬರದ ಕುರಿತು ಅಧಿವೇಶನದಲ್ಲಿ ಮೂರು ದಿನ ಚರ್ಚೆ ನಡೆಯಲಿದೆ ಎಂದರು.





