
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿಯ ಆಧಾರದಲ್ಲಿ ನಡೆಸಿದ ತಪಾಸಣೆ ವೇಳೆ ಅವರ ಬಳಿ ಬಾಂಗ್ಲಾದೇಶದ ಗುರುತಿನ ಚೀಟಿಗಳು ಪತ್ತೆಯಾಗಿವೆ. ಕಳೆದ ಎರಡು ತಿಂಗಳಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದ ಕಾರ್ಮಿಕರ ಮಾಹಿತಿ ಸಂಗ್ರಹಿಸುತ್ತಿದ್ದ ಪೊಲೀಸರಿಗೆ, ಕಾಫಿ ತೋಟಗಳು ಸೇರಿದಂತೆ ವಿವಿಧೆಡೆ ದಿನಗೂಲಿ ಕೆಲಸ ಮಾಡುತ್ತಿದ್ದ ಐವರು ಪತ್ತೆಯಾಗಿದ್ದಾರೆ. ಬಂಧಿತರನ್ನು ಜಹಾಂಗೀರ್, ಫೈಸುದ್ದಿನ್, ನುಮನ್ ಬಶೀರ್, ಮಹಮದ್ ಹುಮೈನ್ ಹಾಗೂ ಮಹಮದ್ ಹಸೀಬುಲ್ ಎಂದು ಗುರುತಿಸಲಾಗಿದ್ದು, ಕೆಲವರು ಕುಟುಂಬ ಸಮೇತರಾಗಿ ಜಿಲ್ಲೆಯಲ್ಲಿ ನೆಲೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.




