
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಪಟ್ಟಣದಲ್ಲಿ ಪರವಾನಗಿ ಇಲ್ಲದೆ ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಣಕಲ್ ಪೊಲೀಸರು ದಾಳಿ ನಡೆಸಿ 11 ಕೆಜಿ ಶಂಕಿತ ಗೋಮಾಂಸ, ₹600 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಬಾತ್ಮೀದಾರರ ಮಾಹಿತಿಯ ಮೇರೆಗೆ ಎಸ್ಎಸ್ಬಿ ಚಿಕನ್ ಅಂಗಡಿ ಸಮೀಪದ ದಿನಸಿ ಅಂಗಡಿಗೆ ದಾಳಿ ನಡೆಸಿದ ವೇಳೆ, ನಯಾಜ್ ಅಹಮ್ಮದ್ (58) ಎಂಬಾತ ಯಾವುದೇ ಪರವಾನಗಿ ಇಲ್ಲದೆ ಗೋಮಾಂಸ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಚಿಕ್ಕಮಗಳೂರಿನಿಂದ 13 ಕೆಜಿ ಮಾಂಸ ತಂದು, ಅದರಲ್ಲಿ 2 ಕೆಜಿ ಮಾರಾಟ ಮಾಡಿ 11 ಕೆಜಿ ಉಳಿದಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ವಶಪಡಿಸಿಕೊಂಡ ಮಾಂಸದ ಮಾದರಿಯನ್ನು ಪಶುವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 12(1) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




