
ಚಾಮರಾಜನಗರ: ಸ್ವದೇಶಿ ವಸ್ತುಗಳನ್ನು ಪ್ರೀತಿಸಿ, ಬಳಸಿ. ರಾಷ್ಟ್ರವನ್ನು ಸಮೃದ್ಧಗೊಳಿಸಲು ನಮ್ಮೆಲ್ಲರ ಪ್ರಯತ್ನ ನಿರಂತರವಾಗಿ ಆಗಬೇಕು. ಸ್ವದೇಶಿ ವಸ್ತುಗಳ ಬಳಕೆಯಿಂದ ಪ್ರತಿಯೊಬ್ಬರ ಬದುಕು ಉತ್ತಮಗೊಂಡು ಉನ್ನತಿ ಯಾಗಲು ಸಾಧ್ಯವಾಗುತ್ತದೆ ಎಂದು ಸಂಸ್ಕೃತಿ ಚಿಂತಕರು,ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ನಗರದ ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯುತ್ ಕ್ಲಬ್ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೈಮಗ್ಗ ದಿನ ಉದ್ಘಾಟನೆ ನೆರವೇರಿಸಿ ಆಗಸ್ಟ್ 7 ಪ್ರತಿ ವರ್ಷ ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಭಾರತದಲ್ಲಿ ಆಚರಿಸಲಾಗುತ್ತಿದೆ. ಲಕ್ಷಾಂತರ ನೇಕಾರರ ಬದುಕಿಗೆ ಸ್ಪೂರ್ತಿ, ಚೈತನ್ಯವನ್ನು ಹಾಗೂ ಅವರ ಶ್ರಮಕ್ಕೆ ಗೌರವವನ್ನು ತರುವಂತಹ ಕಾರ್ಯ ನಡೆಯುತ್ತಿದೆ. ಆಗಸ್ಟ್ 7 1905 ರಂದು ಕಲ್ಕತ್ತಾ ನಗರದಲ್ಲಿ ಸ್ವದೇಶಿ ಆಂದೋಲನದ ಮೂಲಕ ಸ್ವಾತಂತ್ರ್ಯ ಚಳುವಳಿಗೆ ಬಹುದೊಡ್ಡ ಕೊಡುಗೆಯನ್ನು ನೀಡಲಾಯಿತು . ಚರಕದ ಮೂಲಕ ನೂಲು ತೆಗೆಯುವುದು.ಆ ಮೂಲಕ ಸ್ವದೇಶದ ವಸ್ತ್ರಗಳನ್ನು ಬಳಸುವ ಮೂಲಕ ಬ್ರಿಟಿಷರ ವಿರುದ್ಧ ಪ್ರಬಲ ಅಸ್ತ್ರವನ್ನಾಗಿ ಬಳಸಲಾಯಿತು. ಬ್ರಿಟಿಷರು ಲಕ್ಷಾಂತರ ನೇಕಾರರಿಗೆ ಚಿತ್ರ ಹಿಂಸೆಯನ್ನು ನೀಡಿ ಅವರು ಬದುಕನ್ನು ನಾಶ ಮಾಡಿದ ನೂರಾರು ಘಟನೆಗಳನ್ನು ಇತಿಹಾಸದಲ್ಲಿ ಕಾಣಬಹುದು. ಸ್ವಾತಂತ್ರ ಚಳುವಳಿಯಲ್ಲಿ ಸ್ವದೇಶದ ಚಿಂತನೆ ವ್ಯಾಪಕವಾಗಿ ರಾಷ್ಟ್ರೀಯ ಮೌಲ್ಯವನ್ನು ಹೆಚ್ಚಿಸಿದ ಘನತೆ ಮಗ್ಗಗಳಿಗೆ ಇದೆ. ನಮ್ಮ ಪೂರ್ವಿಕರು ಚರಕದ ಮೂಲಕ ಸ್ವಾಭಿಮಾನ, ಆತ್ಮಗೌರವವನ್ನು ಹೆಚ್ಚಿಸಿದ ಕಾರ್ಯವನ್ನು ಮಾಡಿದ್ದಾರೆ. ಅವರೆಲ್ಲರಿಗೂ ನಮನಗಳನ್ನು ಸಲ್ಲಿಸಬೇಕು. ರಾಷ್ಟ್ರೀಯ ಕೈಮಗ್ಗದ ದಿನದ ಆಚರಣೆಯು ನೇಕಾರರ ಬದುಕನ್ನು ಮತ್ತಷ್ಟು ಸುಲಲಿತಗೊಳಿಸಿ,ಪ್ರತಿಯೊಬ್ಬ ವ್ಯಕ್ತಿಯು ಕೈಮಗ್ಗದ ಹಾಗೂ ದೇಶಿಯ ಉತ್ಪನ್ನಗಳನ್ನು ಬಳಸುವ ಮೂಲಕ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ರೈತರು ಮತ್ತು ನೇಕಾರರಿಗೆ ಮತ್ತು ವ್ಯಾಪಾರಗಾರರಿಗೆ ಅವಕಾಶಗಳು ಸೃಷ್ಟಿಸಬೇಕು. ಹೆಚ್ಚಿಸಬೇಕು.ರಾಷ್ಟ್ರೀಯ ಕೈಮಗ್ಗದ ಮೂಲಕ ಪ್ರತಿಯೊಬ್ಬ ಭಾರತೀಯನು ಕೈಮಗ್ಗ ವಸ್ತ್ರಗಳನ್ನು ಬಳಸಿದಾಗ ಖಾದಿ ಯನ್ನು ಪ್ರೀತಿಸಿದಾಗ ದಿನಾಚರಣೆಗೆ ಮತ್ತಷ್ಟು ಶಕ್ತಿ ಬರುತ್ತದೆ. ಬಿಪಿನ್ ಚಂದ್ರ ಪಾಲ್, ಬಾಲ ಗಂಗಾಧರ್ ತಿಲಕ್,ಮಹಾತ್ಮ ಗಾಂಧಿಜಿ ಸ್ವಾತಂತ್ರ ನಂತರ ಲಕ್ಷಾಂತರ ದೇಶ ಭಕ್ತರು ಇಂದಿಗೂ ಖಾದಿ ಯನ್ನು ಬಳಸುತ್ತಾರೆ. ಖಾದಿ ನಮ್ಮ ಶಕ್ತಿಯಾಗಿ ಬೆಳೆಯಬೇಕು ಎಂದು ಋಗ್ವೇದಿ ತಿಳಿಸಿದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ದೊಡ್ಡಮೋಳೆ ಸುರೇಶ್ ಉದ್ಘಾಟಿಸಿ ಮಾತನಾಡಿ ರಾಷ್ಟ್ರೀಯ ಕೈಮಗ್ಗ ದಿನವು ನಮ್ಮೆಲ್ಲರಿಗೂ ಹೆಮ್ಮೆಯ ದಿನವಾಗಲಿ. ದೇಶಪ್ರೇಮವನ್ನು ಹೆಚ್ಚಿಸಲು ಖಾದಿ ಸಹಕಾರಿಯಾಗುವುದು ಯುವಕರು ವಿದ್ಯಾರ್ಥಿಗಳು ಖಾದಿಯನ್ನು ಬಳಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದರು .
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ, ಶ್ರಾವ್ಯ, ವಾಣಿ,ಜ್ಯೋತಿ,ಐಶ್ವರ್ಯ, ಸಾನಿಕ,ಮಂಜುನಾಥ್ ಮುಂತಾದವರು ಇದ್ದರು.




