
ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಜ್ಜಂಪುರ ಪಟ್ಟಣದಲ್ಲಿ ಯುವಕನೊಬ್ಬನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡಿರುವ ಯುವಕನನ್ನು ಮಹಮದ್ ಜೈದ್ ಎಂದು ಗುರುತಿಸಲಾಗಿದೆ. ತಮ್ಮನನ್ನು ಶಾಲೆಯಿಂದ ಕರೆತರಲು ಸ್ಕೂಟಿಯಲ್ಲಿ ತೆರಳಿದ್ದ ಜೈದ್, ಶಾಲೆ ಇನ್ನೂ ಬಿಡದ ಕಾರಣ 2-3 ಬಾರಿ ಶಾಲೆಯ ಬಳಿ ಓಡಾಡುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಬೈಕ್ ವೇಗವಾಗಿ ಓಡಿಸುತ್ತಿದ್ದೀಯೆಂದು ಆರೋಪಿಸಿ ಬಿಜೆಪಿ ಮುಖಂಡ ಸಂತೋಷ್ ಮಾಳೆ ಅವರು ಜೈದ್ ಮೇಲೆ ಕಬ್ಬಿಣದ ರಾಡ್ನಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಜೈದ್ ಅವರ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಮೈತುಂಬಾ ರಕ್ತ ಹೆಪ್ಪುಗಟ್ಟುವಂತೆ ಹೊಡೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ನೂರಾರು ಮುಸ್ಲಿಂ ಸಮುದಾಯದವರು ಹಾಗೂ ಸಾರ್ವಜನಿಕರು ಮಧ್ಯರಾತ್ರಿವರೆಗೂ ಅಜ್ಜಂಪುರ ಪೊಲೀಸ್ ಠಾಣೆ ಎದುರು ಜಮಾಯಿಸಿ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಇದರಿಂದ ಅಜ್ಜಂಪುರ ಪಟ್ಟಣದಲ್ಲಿ ಕೆಲಕಾಲ ಬೂದಿಮುಚ್ಚಿದ ಕೆಂಡದಂತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಸಂತೋಷ್ ಮಾಳೆ ವಿರುದ್ಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಯು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.




