
ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ವಿರುದ್ಧ ಸುಳ್ಳು, ಮಾನಹಾನಿಕರ ಮತ್ತು ತಿರುಚಿದ ಮಾಹಿತಿಗಳನ್ನು ಪ್ರಸಾರ ಮಾಡದಂತೆ ಸಿವಿಲ್ ನ್ಯಾಯಾಲಯಗಳು ನೀಡಿದ್ದ ಪ್ರತಿಬಂಧಕ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ರಜಾಕಾಲೀನ ಪೀಠ ಈ ಆದೇಶ ಹೊರಡಿಸಿದ್ದು, ಸಿವಿಲ್ ನ್ಯಾಯಾಲಯದ ತಡೆಯಾಜ್ಞೆ ಜಾರಿಯಲ್ಲಿದ್ದರೂ ಸುಮಾರು 17ಕ್ಕೂ ಹೆಚ್ಚು ಮಾಧ್ಯಮಗಳು ಹಾಗೂ ಯೂಟ್ಯೂಬ್ ಚಾನೆಲ್ಗಳು ದುರುದ್ದೇಶಪೂರಿತ ಚರ್ಚೆ, ಅಪಪ್ರಚಾರ ಮತ್ತು ಮಾನಹಾನಿಕರ ವಿಷಯಗಳ ಪ್ರಸಾರದಲ್ಲಿ ತೊಡಗಿವೆ ಎಂದು ಅರ್ಜಿದಾರರ ಪರ ವಕೀಲ ಎಸ್. ರಾಜಶೇಖರ್ ವಾದ ಮಂಡಿಸಿದರು. ನಕಲಿ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳನ್ನು ಸೃಷ್ಟಿಸಿ ಮೂಲ ಗುರುತನ್ನು ಮರೆಮಾಚಿ ತಿರುಚಿದ ಮಾಹಿತಿ, ದಾರಿತಪ್ಪಿಸುವ ನಿರೂಪಣೆ ಹಾಗೂ ಮಾನಹಾನಿಕರ ವಿಡಿಯೊಗಳನ್ನು ಹರಡಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದ್ದು, ಈ ಕುರಿತು ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ಪ್ರತಿಬಂಧಕ ಆದೇಶ ಉಲ್ಲಂಘಿಸುತ್ತಿರುವ ಆದಿತ್ಯಕಿರಣ್ ಕ್ರಿಯೇಶನ್ಸ್, ಅಶ್ವವೇಗ ಸ್ಪೆಷಲ್, ವಾರ್ತಾ ಭಾರತಿ ಸೇರಿದಂತೆ 17 ಮಾಧ್ಯಮಗಳ ವಿರುದ್ಧ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದು, ಧರ್ಮಸ್ಥಳದ ಧಾರ್ಮಿಕ ಹಾಗೂ ಸಾಮಾಜಿಕ ಘನತೆಗೆ ಧಕ್ಕೆ ತರುವ ಸುಳ್ಳು ಮತ್ತು ತಿರುಚಿದ ಮಾಹಿತಿಗಳ ಪ್ರಸಾರವನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. ಜೊತೆಗೆ, ನಕಲಿ ಖಾತೆಗಳ ಮೂಲಕ ನಿರಂತರ ಅಪಪ್ರಚಾರ ನಡೆಸುವವರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆಯ ವೇಳೆಗೆ ವಿವರವಾದ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದು, ಡಿಜಿಟಲ್ ಮಾಧ್ಯಮಗಳಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಾನಹಾನಿ ಕೃತ್ಯಗಳಲ್ಲಿ ತೊಡಗುವವರಿಗೆ ಇದು ಕಠಿಣ ಎಚ್ಚರಿಕೆಯ ಸಂದೇಶವಾಗಿದೆ.




