ಮಣಿಪಾಲ: ಅಂಗಾಂಗ ದಾನವು ಯುವಜನರಿಗೆ ಮಾತ್ರ ಸೀಮಿತ ಎಂಬ ಸಮಾಜದಲ್ಲಿರುವ ಸಾಮಾನ್ಯ ಕಲ್ಪನೆಯನ್ನು ಕರಾವಳಿ ಕರ್ನಾಟಕದ 76 ವರ್ಷದ ಮಹಿಳೆ ಸುಳ್ಳೆಂದು ಸಾಬೀತುಪಡಿಸಿದ್ದಾರೆ. ಗಂಗೊಳ್ಳಿಯ ನಿವಾಸಿಯಾಗಿದ್ದ ಶ್ರೀಮತಿ ಜೆನ್ನಿ ಡಿ’ಸೋಜಾ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದ ಬಳಿಕ, ಅವರ ಕುಟುಂಬ ಅತ್ಯಂತ ಮಾನವೀಯ ನಿರ್ಧಾರ ಕೈಗೊಂಡು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದೆ. ಹಠಾತ್ ತಲೆಸುತ್ತು ಕಾಣಿಸಿಕೊಂಡು ಕೆಲವೇ ಗಂಟೆಗಳಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿರುವುದು ದೃಢಪಟ್ಟಿದ್ದು, ವೈದ್ಯರು ಎಲ್ಲಾ ರೀತಿಯ ಚಿಕಿತ್ಸಾ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ. ನಿಗದಿತ ವೈದ್ಯಕೀಯ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ಪರೀಕ್ಷೆಗಳ ಬಳಿಕ ಅವರನ್ನು ಮೆದುಳು ನಿಷ್ಕ್ರಿಯಗೊಂಡ (Brain Dead) ರೋಗಿ ಎಂದು ಅಧಿಕೃತವಾಗಿ ಘೋಷಿಸಲಾಯಿತು. ತಮ್ಮ ಆತ್ಮೀಯರನ್ನು ಕಳೆದುಕೊಂಡ ನೋವಿನ ನಡುವೆಯೂ ಅವರ ಕುಟುಂಬ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿ ಜೀವ ಉಳಿಸಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಮಾಜಕ್ಕೆ ಸಾರಿ ಹೇಳಿತು. ಈ ಮಹತ್ವದ ನಿರ್ಧಾರದ ಫಲವಾಗಿ ಅವರ ಯಕೃತ್ತು (ಲಿವರ್) ಯಕೃತ್ತಿನ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ಹೊಸ ಬದುಕಿನ ಆಶಾಕಿರಣವಾಗಿದ್ದು, ಅವರ ನೇತ್ರಗಳು ದೃಷ್ಟಿಹೀನರಿಗೆ ಬೆಳಕಾಗಲಿವೆ ಹಾಗೂ ಚರ್ಮ ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ. ಈ ಅಂಗಾಂಗ ದಾನ ಪ್ರಕ್ರಿಯೆಯು ಕರ್ನಾಟಕ ಸರ್ಕಾರದ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಜೀವಸಾರ್ಥಕತೆ ಸಹಯೋಗದೊಂದಿಗೆ ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಮಾತನಾಡಿ, ಅಂಗಾಂಗ ದಾನವನ್ನು ಸಾಮಾನ್ಯವಾಗಿ ಯುವಜನರಿಗೆ ಮಾತ್ರ ಸೀಮಿತವೆಂದು ಭಾವಿಸಲಾಗುತ್ತದೆ. ಆದರೆ 76 ವರ್ಷದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬ ಇತರರಿಗೆ ಜೀವ ನೀಡುವ ಮಹತ್ತರ ನಿರ್ಧಾರ ಕೈಗೊಂಡಿರುವುದು ಸಮಾಜಕ್ಕೆ ಮಾದರಿಯಾಗಿದೆ. ಕರುಣೆ ಹಾಗೂ ದಾನಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಈ ಕುಟುಂಬ ಸಾಬೀತುಪಡಿಸಿದ್ದು, ಅವರ ಸ್ಮರಣೆ ಇನ್ನಷ್ಟು ಕುಟುಂಬಗಳು ಅಂಗಾಂಗ ದಾನಕ್ಕೆ ಮುಂದೆ ಬರಲು ಪ್ರೇರಣೆಯಾಗಲಿ ಎಂದು ಹೇಳಿದರು. ಮೃತರ ಕುಟುಂಬದ ಈ ಮಾನವೀಯ ನಿರ್ಧಾರಕ್ಕೆ ಕಸ್ತೂರ್ಬಾ ಆಸ್ಪತ್ರೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದು, ಅಂಗಾಂಗ ದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿದ ವೈದ್ಯರು, ಅಂಗಾಂಗ ಕಸಿ ಸಂಯೋಜಕರು ಹಾಗೂ ಸಂಬಂಧಿತ ಸಿಬ್ಬಂದಿಯ ಸೇವೆಯನ್ನು ಪ್ರಶಂಸಿಸಿದೆ. ಸಮುದ್ರ ತೀರದಲ್ಲಿ ಶಾಂತ ಹಾಗೂ ಸಾರ್ಥಕ ಜೀವನ ನಡೆಸಿದ ಶ್ರೀಮತಿ ಜೆನ್ನಿ ಡಿ’ಸೋಜಾ ಅವರು ತಮ್ಮ ಅಂತಿಮ ಕ್ಷಣದಲ್ಲೂ ಮತ್ತೊಬ್ಬರ ಬದುಕಿಗೆ ಆಶಾಕಿರಣವಾಗಿ, “ಜೀವ ಉಳಿಸಲು ಎಂದಿಗೂ ತಡವಾಗುವುದಿಲ್ಲ” ಎಂಬ ಅಮೂಲ್ಯ ಸಂದೇಶವನ್ನು ಸಮಾಜಕ್ಕೆ ನೀಡಿದರು.
ವರದಿ: ಅರುಣ್ ಭಟ್ ಕಾರ್ಕಳ
