
ಕಾರ್ಕಳ: ರಾಜ್ಯ ಸರ್ಕಾರವು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವಕರನ್ನು ಸಂಘಟಿಸಿ ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ ಮತ್ತು ರಾಷ್ಟ್ರಸೇವೆಯ ಮನೋಭಾವ ಬೆಳೆಸುವ ಉದ್ದೇಶದಿಂದ ‘ಭಾರತ್ ಜೋಡೋ’ ಯುವ ಸಂಘಗಳ ಸ್ಥಾಪನೆಗೆ ಕೈಗೊಂಡಿರುವ ನಿರ್ಧಾರ ಹಾಗೂ ಅದಕ್ಕೆ ಅಗತ್ಯ ಅನುದಾನಕ್ಕೆ ಅನುಮೋದನೆ ನೀಡಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ. ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 10 ಸಾವಿರ ಯುವ ಸಂಘಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿರುವುದು ಯುವಜನರಿಗೆ ಹೊಸ ಅವಕಾಶಗಳನ್ನು ಕಲ್ಪಿಸುವ ಮಹತ್ವದ ಯೋಜನೆಯಾಗಿದ್ದು, ಯುವ ಸಮುದಾಯವು ದೇಶದ ಅಮೂಲ್ಯ ಸಂಪತ್ತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಮಾಜಮುಖಿ ಚಟುವಟಿಕೆಗಳು, ಪರಿಸರ ಸಂರಕ್ಷಣೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ವಯಂಸೇವಾ ಕಾರ್ಯಗಳು ಹಾಗೂ ಸೌಹಾರ್ದ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದ ಸರ್ಕಾರವು ಯುವಜನರ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದ್ದಾರೆ. ಅಭಿವೃದ್ಧಿಯ ಜೊತೆಗೆ ಯುವ ಸಮುದಾಯವನ್ನು ಒಗ್ಗೂಡಿಸುವ ದೃಷ್ಟಿಯಿಂದ ಜಾರಿಯಾಗುತ್ತಿರುವ ಈ ಯೋಜನೆ ರಾಜ್ಯದ ಯುವಕರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಲಿದ್ದು, ಕಾರ್ಕಳ ಸೇರಿದಂತೆ ರಾಜ್ಯದ ಎಲ್ಲ ಭಾಗಗಳ ಯುವಕರು ಇದರ ಪ್ರಯೋಜನ ಪಡೆದು ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಉದಯ ಶೆಟ್ಟಿ ಮುನಿಯಾಲು ತಮ್ಮ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.
ವರದಿ:ಅರುಣ್ ಭಟ್ ಕಾರ್ಕಳ




