
ಗಬ್ಗಲ್: ತಲೆಯೊಳಗಿನ ಗೆಡ್ಡೆಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೂ ಚಿಕಿತ್ಸೆಗೆ ಬೇಕಾದ ಹಣದ ಕೊರತೆಯಿಂದ ಗಬ್ಗಲ್ ಗ್ರಾಮದ ಬಡಕುಟುಂಬವೊಂದು ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ. ಗ್ರಾಮದ ಗುಲಾಬಿ ಅವರು ಕಳೆದ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬವು ಸಾಲ ಮಾಡಿ ಇದುವರೆಗೆ ಚಿಕಿತ್ಸೆ ನೀಡಿದೆ. ಆದರೆ ಮುಂದಿನ ಚಿಕಿತ್ಸೆಗೆ ಅಗತ್ಯವಿರುವ ಹಣದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಅವರಿಗೆ ಮಾತು ತೊದಲುವುದು, ನಡೆಯಲು ತೊಂದರೆಯಾಗುವುದು, ಕಿವಿ ಕೇಳಿಸದಿರುವುದು ಹಾಗೂ ದೃಷ್ಟಿ ಮಂಜಾಗುವಂತಹ ಲಕ್ಷಣಗಳು ಕಾಣಿಸಿಕೊಂಡಿದ್ದು, ಆರಂಭದಲ್ಲಿ ಬಾಳೆಹೊನ್ನೂರು, ಮಾಗುಂಡಿ ಸೇರಿದಂತೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿಲ್ಲ. ಬಳಿಕ ಶಿವಮೊಗ್ಗ ಹಾಗೂ ಪಡೀಲ್ ಆಸ್ಪತ್ರೆಗಳಲ್ಲಿ ಪರೀಕ್ಷಿಸಿದ ವೈದ್ಯರು, ಎಡ ಕಿವಿಯ ಮೇಲ್ಭಾಗದ ತಲೆಯೊಳಗೆ ಗೆಡ್ಡೆ ಇರುವುದಾಗಿ ತಿಳಿಸಿ ತುರ್ತು ಶಸ್ತ್ರಚಿಕಿತ್ಸೆ ಅಗತ್ಯ ಎಂದು ಸಲಹೆ ನೀಡಿದ್ದಾರೆ. ಈ ಚಿಕಿತ್ಸೆಗೆ ಸುಮಾರು ₹3 ಲಕ್ಷ ವೆಚ್ಚವಾಗಲಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಕ್ಕೆ ಈ ಮೊತ್ತವನ್ನು ಭರಿಸುವುದು ಸಾಧ್ಯವಾಗುತ್ತಿಲ್ಲ. ಗುಲಾಬಿ ಅವರ ಪತಿ ಒಂದು ವರ್ಷದ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದು, ಅವರಿಗೆ 8ನೇ ತರಗತಿಯಲ್ಲಿ ಓದುತ್ತಿರುವ ಮಗ ಹಾಗೂ 6ನೇ ತರಗತಿಯಲ್ಲಿ ಓದುತ್ತಿರುವ ಮಗಳಿದ್ದಾರೆ. ಪ್ರಸ್ತುತ ಗುಲಾಬಿ ಅವರ ತಾಯಿ ಮತ್ತು ಕುಟುಂಬದವರು ಅವರನ್ನು ನೋಡಿಕೊಳ್ಳುತ್ತಿದ್ದು, ಚಿಕಿತ್ಸೆಗೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ನೆರವು ನೀಡಲು ಇಚ್ಛಿಸುವ ದಾನಿಗಳು ಕರ್ನಾಟಕ ಬ್ಯಾಂಕ್, ಬಾಳೆಹೊನ್ನೂರು ಶಾಖೆಯ ಖಾತೆ ಸಂಖ್ಯೆ 5382500100803601, IFSC: KARB0000052 ಗೆ ಹಣ ಜಮಾ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 7338628023 ಸಂಖ್ಯೆಯನ್ನು ಸಂಪರ್ಕಿಸಬಹುದು.




