
ಕೊಳ್ಳೇಗಾಲ: ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ವಿಭಾಗದ ಕೊಳ್ಳೇಗಾಲ ವನ್ಯಜೀವಿ ವಲಯದ ಉಪವಲಯ ಅರಣ್ಯಾಧಿಕಾರಿ ಹಾಗೂ ಮುಖ್ಯಮಂತ್ರಿ ಪದಕ ಪುರಸ್ಕೃತ ಬಿ. ಅನಂತ ರಾಮು ಅವರ ಪುತ್ರಿ ಕುಮಾರಿ ಹಿರಣ್ಮಯಿ ತಮ್ಮ ಹುಟ್ಟುಹಬ್ಬವನ್ನು ವಾಕ್ ಮತ್ತು ಶ್ರವಣ ನ್ಯೂನತೆಯ ಮಕ್ಕಳೊಂದಿಗೆ ವಿನೂತನವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಳೆದ 15 ವರ್ಷಗಳಿಂದ ಅವರು ತಮ್ಮ ಹುಟ್ಟುಹಬ್ಬವನ್ನು ವೃದ್ಧಾಶ್ರಮ, ಅನಾಥಾಶ್ರಮ, ಅಂಧರ ಶಾಲೆ, ಜ್ಯೋತಿಬಾಲ ಭವನ ಕೇಂದ್ರ ಸೇರಿದಂತೆ ವಿವಿಧ ಸೇವಾ ಸಂಸ್ಥೆಗಳಲ್ಲಿ ಆಚರಿಸುತ್ತಾ, ಅಗತ್ಯವಿರುವವರಿಗೆ ನೆರವು ನೀಡುವ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಸಹೋದ್ಯೋಗಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಅಪಘಾತ ವಿಮೆ ಮಾಡಿಸುವಂತಹ ಸೇವಾ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದ್ದು, ಮಾನವೀಯ ಮೌಲ್ಯಗಳ ಜೊತೆಗೆ ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಗಿಡಗಳನ್ನು ನೆಡುವ ಅಭಿಯಾನವನ್ನೂ ನಡೆಸುತ್ತಿದ್ದಾರೆ. ಅದರಂತೆ ಈ ವರ್ಷವೂ ಕೊಳ್ಳೇಗಾಲದ ವಾಕ್ ಮತ್ತು ಶ್ರವಣ ನ್ಯೂನತೆಯ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಮಯ ಕಳೆಯುವ ಜೊತೆಗೆ ಶಾಲಾ ಆವರಣದಲ್ಲಿ ಗಿಡ ನೆಟ್ಟು ಪರಿಸರ ಕಾಳಜಿಯ ಸಂದೇಶ ಸಾರಿದರು. ಬಳಿಕ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿ ಅವರೊಂದಿಗೆ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಿಸುವ ಅವರ ಈ ವಿಶೇಷ ನಡೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದು, ಇತರರಿಗೂ ಮಾದರಿಯಾಗಿದೆ.





