
ಕಾರ್ಕಳ: 2025–26ನೇ ಶೈಕ್ಷಣಿಕ ವರ್ಷದಲ್ಲಿ ಶೇ.99.85 ಫಲಿತಾಂಶ ದಾಖಲಿಸಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಹಾಗೂ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಕಾರ್ಕಳ ಶೈಕ್ಷಣಿಕ ವಲಯದ (ಕಾರ್ಕಳ ಮತ್ತು ಹೆಬ್ರಿ ತಾಲೂಕು) ಶಾಲೆಗಳ ಸಾಧನೆಯನ್ನು ಗೌರವಿಸುವ ‘ಯಶೋಯಾನ–2026’ ಕಾರ್ಯಕ್ರಮವು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ತಾಲೂಕಿನ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ ಹಾಗೂ ಕ್ರಿಯೇಟಿವ್ ವಿದ್ಯಾಸಂಸ್ಥೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ದಾನಿ ಸಿಎ ಕಮಲಾಕ್ಷ ಕಾಮತ್ ಮಾತನಾಡಿ, ಶಾಲೆಯ ಉತ್ತಮ ಫಲಿತಾಂಶಕ್ಕೆ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಂಪ್ರದಾಯವಿದ್ದರೂ, ಅದರ ಹಿಂದೆ ಶ್ರಮಿಸಿದ ಶಿಕ್ಷಕರಿಗೆ ಗೌರವ ದೊರೆಯುವುದು ಕಡಿಮೆ. ಶಿಕ್ಷಕರು ಉತ್ತಮ ಸಮಾಜದ ನಿರ್ಮಾಪಕರಾಗಿದ್ದು, ಅವರನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾರ್ಕಳ ಶೈಕ್ಷಣಿಕ ವಲಯದ ಅತ್ಯುತ್ತಮ ಫಲಿತಾಂಶಕ್ಕೆ ಕಾರಣರಾದ ಎಲ್ಲಾ 57 ಪ್ರೌಢಶಾಲೆಗಳನ್ನು ಶಾಲು, ನೆನಪಿನ ಕಾಣಿಕೆ ಹಾಗೂ ಹಣ್ಣಿನ ಗಿಡ ನೀಡಿ ಸನ್ಮಾನಿಸಲಾಯಿತು. ಶಾಲೆಗಳ ಪರವಾಗಿ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಸನ್ಮಾನ ಸ್ವೀಕರಿಸಿದರು. ಅಲ್ಲದೆ, ವಿವಿಧ ಪ್ರೌಢಶಾಲೆಗಳ ನಾಲ್ಕು ವಿಭಾಗಗಳ ಟಾಪ್–11 ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಪ್ರಶಸ್ತಿ ಫಲಕ, ಶಾಲು, ಹಣ್ಣಿನ ಗಿಡ ಹಾಗೂ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಈ ನಗದು ಬಹುಮಾನಗಳನ್ನು ಕಾರ್ಕಳದ ಅಶೋಕ್ ರಾವ್ ಸ್ಮಾರಕ ಟ್ರಸ್ಟ್ ಹಾಗೂ ಜೆಸಿಐ ಬೆಳ್ಮಣ್ ಪ್ರಾಯೋಜಿಸಿತ್ತು. ಕಾರ್ಯಕ್ರಮದಲ್ಲಿ ಶಿಖರೋಪನ್ಯಾಸ ನೀಡಿದ ಉಡುಪಿ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಮಾತನಾಡಿ, ಶಾಲೆಗಳ ಫಲಿತಾಂಶವು ಶಿಕ್ಷಣ ವ್ಯವಸ್ಥೆಯ ಒಂದು ಉಪ ಉತ್ಪನ್ನ ಮಾತ್ರವಾಗಿದ್ದು, ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ನಾಗರಿಕ ಪ್ರಜ್ಞೆ ಹಾಗೂ ಹೃದಯ ಶ್ರೀಮಂತಿಕೆಯನ್ನು ಬೆಳೆಸುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು. ಶಿಕ್ಷಕರು ತಮ್ಮ ಪ್ರಾಮಾಣಿಕ ಕರ್ತವ್ಯದ ಮೂಲಕ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕ ವಿನಾಯಕ ಜೋಗ್ ಹಾಗೂ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಕಲ್ಯ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸುಭಾಸಚಂದ್ರ ಶೆಟ್ಟಿಗಾರ್ ಅವರನ್ನು ಮಾನಪತ್ರದೊಂದಿಗೆ ಸನ್ಮಾನಿಸಲಾಯಿತು. ಅಲ್ಲದೆ ದಾನಿಗಳಾದ ಸಿಎ ಕಮಲಾಕ್ಷ ಕಾಮತ್, ಡಾ. ಅಶೋಕ್ ಕಾಮತ್ ಹಾಗೂ ಕ್ರಿಯೇಟಿವ್ ಸಂಸ್ಥೆಯ ವಿನಾಯಕ ಜೋಗ್ ಅವರನ್ನು ಸಂಘಟಕರು ಗೌರವಿಸಿದರು. ಕಾರ್ಕಳ ವಲಯದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಭಾಸ್ಕರ್ ಟಿ. ಸ್ವಾಗತಿಸಿದರು. ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ, ತಾಲೂಕು ಅಧ್ಯಕ್ಷ ಆನಂದ ಹಾಗೂ ಸಮೂಹ ಸಂಪನ್ಮೂಲ ಕೇಂದ್ರದ ಮುಖ್ಯಸ್ಥೆ ಇಂದಿರಾ ಶುಭಾಶಂಸನೆ ಸಲ್ಲಿಸಿದರು. ಅಪರ್ಣ ಹಾಗೂ ಸ್ಮಿತಾ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರೆ, ಶಿಕ್ಷಕರ ಸಂಘದ ಕಾರ್ಯದರ್ಶಿ ಸದಾಶಿವ ಬಾಯರಿ ಧನ್ಯವಾದ ಸಲ್ಲಿಸಿದರು. ರಾಜೇಂದ್ರ ಭಟ್ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಅರುಣ್ ಭಟ್ ಕಾರ್ಕಳ







