
ಬ್ರಹ್ಮಾವರ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಮನ್ವಯ ಅಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ಜಿಲ್ಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ತಾಲೂಕು ಶಿಕ್ಷಕರ ಸಂಘ ಹಾಗೂ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ, ಶಾಲಾ ಶಿಕ್ಷಣ ಇಲಾಖೆಯಲ್ಲಿ 29 ವರ್ಷಗಳ ಕಾಲ ಇಲಾಖಾಧಿಕಾರಿಗಳ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ಯೋಗೀಶ್ ಉಳ್ಳಾಲ ಅವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಮಂಗಳವಾರ ಬ್ರಹ್ಮಾವರದ ಉನ್ನತಿ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಪಿ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಈ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಬೇರೆಡೆಗೆ ವರ್ಗಾವಣೆಗೊಂಡ ವಿಠಲ್ದಾಸ್ ಬನ್ನಂಜೆ, ವಸಂತ ಶೆಟ್ಟಿ, ನಾಗೇಶ್ ಶ್ಯಾನುಭಾಗ್, ಓ.ಆರ್. ಪ್ರಕಾಶ್, ಶಭನಾ ಅಂಜುಂ, ಲೋಕೇಶ್, ಆನಂದ್, ಬಿ.ಟಿ. ನಾಯ್ಕ್ ಹಾಗೂ ಪ್ರಸ್ತುತ ವಿದ್ಯಾಂಗ ಉಪ ನಿರ್ದೇಶಕರಾಗಿರುವ ಮಾಜಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸೇರಿದಂತೆ ಒಂಬತ್ತು ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದು, ಯೋಗೀಶ್ ಉಳ್ಳಾಲ ಅವರ ಸೇವೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು. ಡಯಟ್ ಅಭಿವೃದ್ಧಿ ವಿಭಾಗದ ಅಶೋಕ್ ಕಾಮತ್ ಮಾತನಾಡಿ, ಯೋಗೀಶ್ ಉಳ್ಳಾಲ ಅವರು ತಮ್ಮ 29 ವರ್ಷಗಳ ಸೇವಾವಧಿಯಲ್ಲಿ ಕರ್ತವ್ಯನಿಷ್ಠೆ, ಸಮಯಪಾಲನೆ, ಪ್ರಾಮಾಣಿಕತೆ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಅತ್ಯುತ್ತಮ ಬಾಂಧವ್ಯ ಬೆಳೆಸಿಕೊಂಡಿರುವುದೇ ಇಂತಹ ಅಪರೂಪದ ಸಮಾರಂಭದಲ್ಲಿ ಒಂಬತ್ತು ಮಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಭಾಗವಹಿಸಲು ಕಾರಣವಾಗಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಅನುಪಾಲನಾಧಿಕಾರಿಗಳು, ವಿವಿಧ ವಿಭಾಗಗಳ ಸಿಬ್ಬಂದಿ, ಶಿಕ್ಷಕರು ಹಾಗೂ ಅನೇಕ ಗಣ್ಯರು ಭಾಗವಹಿಸಿ ಯೋಗೀಶ್ ಉಳ್ಳಾಲ ಅವರ ಸೇವೆಯನ್ನು ಕೊಂಡಾಡಿ ಶುಭ ಹಾರೈಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಸ್ವಾಗತಿಸಿದರು. ಬಿ.ಆರ್.ಪಿ. ಪದ್ಮ ವಂದಿಸಿದರು. ಓಂಶ್ರೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ವರದಿ: ಅರುಣ್ ಭಟ್ ಕಾರ್ಕಳ





