
ಕೊಟ್ಟಿಗೆಹಾರ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿರುವ ಡಾ. ಇಕ್ಲಾಸ್ ಅಹ್ಮದ್ ಅವರ ವರ್ಗಾವಣೆ ಸ್ಥಳೀಯ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಮುಖಂಡರಲ್ಲಿ ಬೇಸರ ಮೂಡಿಸಿದ್ದು, ಅವರು ಇದೇ ಆಸ್ಪತ್ರೆಯಲ್ಲಿ ಸೇವೆ ಮುಂದುವರಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಕಳೆದ ಸುಮಾರು 20 ವರ್ಷಗಳಿಂದ ಬಣಕಲ್ ಹಾಗೂ ಬೆಟ್ಟಗೆರೆ ಭಾಗದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಇಕ್ಲಾಸ್ ಅಹ್ಮದ್ ಅವರು ತಮ್ಮ ಸರಳತೆ, ಸೇವಾ ಮನೋಭಾವ, ಸಮಯಪಾಲನೆ ಹಾಗೂ ರೋಗಿಗಳೊಂದಿಗೆ ಬೆಳೆಸಿಕೊಂಡಿದ್ದ ಆತ್ಮೀಯ ಬಾಂಧವ್ಯದಿಂದ ಜನಪ್ರಿಯರಾಗಿದ್ದರು. ಪ್ರತಿದಿನ ಸಮಯಕ್ಕೆ ಆಸ್ಪತ್ರೆಗೆ ಆಗಮಿಸಿ ಯಾವುದೇ ಭೇದಭಾವವಿಲ್ಲದೆ ಎಲ್ಲ ರೋಗಿಗಳಿಗೆ ಸ್ಪಂದಿಸಿ ಚಿಕಿತ್ಸೆ ನೀಡುತ್ತಿದ್ದ ಅವರು ಸಾರ್ವಜನಿಕರ ವಿಶ್ವಾಸ ಗಳಿಸಿದ್ದರು. ಅವರ ಚಿಕಿತ್ಸೆಯ ಮೇಲಿನ ನಂಬಿಕೆಯಿಂದ ಬಣಕಲ್ ಭಾಗದಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಇತರೆ ಹೋಬಳಿಗಳ ಜನರು ಸಹ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಇದರ ಪರಿಣಾಮವಾಗಿ ಬಣಕಲ್ ಸರ್ಕಾರಿ ಆಸ್ಪತ್ರೆ ಜನರ ವಿಶ್ವಾಸಾರ್ಹ ಆರೋಗ್ಯ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಡಾ. ಇಕ್ಲಾಸ್ ಅಹ್ಮದ್ ಅವರ ವರ್ಗಾವಣೆ ಸುದ್ದಿ ತಿಳಿಯುತ್ತಿದ್ದಂತೆಯೇ ಹಲವು ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ತಮ್ಮ ಕಳವಳ ವ್ಯಕ್ತಪಡಿಸಿದ್ದು, ಈ ಭಾಗದ ಆರೋಗ್ಯ ಸೇವೆಯಲ್ಲಿ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅನುಭವಿ ವೈದ್ಯರ ಸೇವೆ ಮುಂದುವರಿಯುವುದು ಜನರ ಹಿತದೃಷ್ಟಿಯಿಂದ ಅಗತ್ಯವಾಗಿದ್ದು, ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿರುವ ಡಾ. ಇಕ್ಲಾಸ್ ಅಹ್ಮದ್ ಅವರ ಸೇವೆಯನ್ನು ಬಣಕಲ್ ಆಸ್ಪತ್ರೆಯಲ್ಲೇ ಮುಂದುವರಿಸಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




