
ಮೂಡಿಗೆರೆ: ತಾಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳು ಗ್ರಾಮದ ಪ್ರಮುಖ ರಸ್ತೆ ಹಲವು ವರ್ಷಗಳಿಂದ ಗುಂಡಿಗಳಿಂದ ತುಂಬಿ ಹದಗೆಟ್ಟಿದ್ದರೂ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸುಧಾ ರಘುಪತಿ ಪುರೋಹಿತ್ ದಂಪತಿಗಳು ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾಗಿ ಮಾದರಿಯಾಗಿದ್ದಾರೆ. ಸುಮಾರು ವರ್ಷಗಳಿಂದ ರಸ್ತೆ ಸಂಪೂರ್ಣ ಹಾಳಾಗಿದ್ದು, ಹಲವಾರು ತಿಂಗಳುಗಳಿಂದ ರಸ್ತೆಯ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ದೊಡ್ಡ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ಕೊಳಚೆ ಗುಂಡಿಗಳಾಗಿ ಮಾರ್ಪಟ್ಟಿತ್ತು. ಇದರಿಂದ ಕ್ರಿಮಿಕೀಟಗಳು ಹೆಚ್ಚಾಗಿ ರೋಗ ಹರಡುವ ಆತಂಕ ಎದುರಾಗಿತ್ತು. ಅಲ್ಲದೆ ನಾಯಿಗಳು ಮತ್ತು ಜಾನುವಾರುಗಳು ಅದೇ ಕೊಳಚೆ ನೀರಿನಲ್ಲಿ ಬಿದ್ದು ಹೊರಳಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸುತ್ತಮುತ್ತ ದುರ್ವಾಸನೆ ಹರಡುತ್ತಿತ್ತು. ರಸ್ತೆ ದುರಸ್ತಿಗಾಗಿ ಗ್ರಾಮಸ್ಥರು ಅನೇಕ ಬಾರಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ವಾಹನಗಳು ನಿರಂತರವಾಗಿ ಸಂಚರಿಸುವ ಈ ರಸ್ತೆಯಲ್ಲಿ ಹಲವು ವರ್ಷಗಳಿಂದ ಗುಂಡಿಗಳು ನಿರ್ಮಾಣವಾಗಿದ್ದರೂ ದುರಸ್ತಿ ಕಾರ್ಯ ನಡೆಯದೇ ಉಳಿದಿತ್ತು. ಈಗಾಗಲೇ ರಸ್ತೆಯ ಒಂದು ಭಾಗ ಅಭಿವೃದ್ಧಿಗೊಂಡಿದ್ದರೂ ಮುಂದಿನ ಭಾಗದ ರಸ್ತೆ ಅಭಿವೃದ್ಧಿ ಕುಂಠಿತಗೊಂಡಿದ್ದು, ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಟ್ಟು ರಸ್ತೆಯೇ ಕಾಣದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದರಿಂದ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡ ಅನೇಕ ಘಟನೆಗಳು ನಡೆದಿದ್ದು, ಕೆಲ ವಾಹನ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿದ್ದರು. ಕೆಲವು ವಾಹನಗಳು ರಸ್ತೆಯಲ್ಲೇ ಸಿಲುಕಿ ಗಂಟೆಗಟ್ಟಲೆ ತೊಂದರೆ ಅನುಭವಿಸುವುದು ನಿತ್ಯದ ಗೋಳಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯವನ್ನು ಗಮನಿಸಿದ ಸುಧಾ ಹಾಗೂ ರಘುಪತಿ ದಂಪತಿಗಳು ಸುಮಾರು 1.5 ಲಕ್ಷ ರೂಪಾಯಿ ಸ್ವಂತ ಹಣ ಖರ್ಚು ಮಾಡಿ ಜೆಸಿಬಿ ಯಂತ್ರದ ಸಹಾಯದಿಂದ ಜಲ್ಲಿ, ಮಣ್ಣು ಹಾಗೂ ಎಂ-ಸ್ಯಾಂಡ್ ಬಳಸಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಈ ಕಾರ್ಯ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾರ್ವಜನಿಕ ವಲಯದಲ್ಲಿಯೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. “ರಸ್ತೆಯ ಗುಂಡಿಗಳಿಂದ ನಮ್ಮ ಕಾರು ಸಹ ಹಾನಿಗೊಳಗಾಗಿತ್ತು. ಅಲ್ಲದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುವುದನ್ನು ನೋಡಿ ಬೇಸರವಾಯಿತು. ಇದೇ ಕಾರಣದಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ವಂತ ಹಣ ಖರ್ಚು ಮಾಡಿ ರಸ್ತೆ ದುರಸ್ತಿ ಮಾಡಿಸಿದ್ದೇವೆ” ಎಂದು ಶ್ರೀಮತಿ ಸುಧಾ ರಘುಪತಿ ತಿಳಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನು ದಂಪತಿಗಳು ಮಾಡಿ ತೋರಿಸಿರುವುದು ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪಿಡಬ್ಲ್ಯುಡಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಶಾಶ್ವತ ರಸ್ತೆ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಂಡರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸಣ್ಣಪುಟ್ಟ ಸಾರ್ವಜನಿಕ ಸಮಸ್ಯೆಗಳನ್ನೇ ಪರಿಹರಿಸಲು ವಿಫಲವಾಗಿರುವ ಆಡಳಿತ ದೊಡ್ಡ ಅಭಿವೃದ್ಧಿ ಕಾಮಗಾರಿಗಳನ್ನು ಹೇಗೆ ನಿರ್ವಹಿಸಲಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದ್ದು, ಅಧಿಕಾರಿಗಳು ಸತ್ತಿದ್ದಾರೆಯೇ ಎಂಬ ಆಕ್ರೋಶಭರಿತ ಪ್ರಶ್ನೆಯೂ ಕೇಳಿಬರುತ್ತಿದೆ.





