ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಎರಡು ಕಾಡಾನೆಗಳ ಹಾವಳಿ ಇಡೀ ರಾತ್ರಿ ಜನರನ್ನು ಆತಂಕಕ್ಕೀಡು ಮಾಡಿದ್ದು, ಪಟ್ಟಣದ ನಿವಾಸಿಗಳ ನಿದ್ದೆಗೆಡಿಸಿದೆ. ಕಾಡಿನಿಂದ ನಾಡಿಗೆ ಬಂದ ಎರಡು ಕಾಡಾನೆಗಳು ರಾತ್ರಿ ವೇಳೆ ಗ್ರಾಮದೊಳಗೆ ಸಂಚರಿಸಿ ಹಲವು ಪ್ರದೇಶಗಳಲ್ಲಿ ಓಡಾಟ ನಡೆಸಿದ್ದು, ಈ ವೇಳೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗೇಟ್ ಮುರಿದು ಒಳನುಗ್ಗಿದ ಕಾಡಾನೆಗಳು ಕಾಲೇಜು ಆವರಣದಲ್ಲಿ ಸಂಚರಿಸಿ ಗೇಟ್ಗೆ ಹಾನಿ ಉಂಟುಮಾಡಿವೆ. ಅಲ್ಲದೆ ಕೆಲವು ಮನೆಗಳ ಗೇಟ್ಗಳನ್ನು ಮುರಿದು ಮನೆ ಅಂಗಳಕ್ಕೆ ನುಗ್ಗಲು ಯತ್ನಿಸಿದ ಪರಿಣಾಮ ಸ್ಥಳೀಯರು ಭಯಭೀತರಾಗಿ ಮನೆಗಳಿಂದ ಹೊರಬರಲು ಸಹ ಹೆದರಿದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಡಾನೆಗಳ ನಿರಂತರ ಓಡಾಟದಿಂದ ಆಲ್ದೂರು ಪಟ್ಟಣದ ಜನರು ಇಡೀ ರಾತ್ರಿ ಜಾಗರಣೆ ನಡೆಸಬೇಕಾಯಿತು. ಗ್ರಾಮದೊಳಗೆ ಕಾಡಾನೆಗಳು ಓಡಾಡುತ್ತಿರುವ ದೃಶ್ಯ ಕಂಡು ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದು, ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಆಲ್ದೂರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಧ್ಯರಾತ್ರಿಯಲ್ಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿನತ್ತ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಡಾನೆಗಳ ಹಾವಳಿಯಿಂದ ಪಟ್ಟಣದ ಜನರು ಭಯದ ವಾತಾವರಣದಲ್ಲಿ ರಾತ್ರಿ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮದೊಳಗೆ ಕಾಡಾನೆಗಳ ಪ್ರವೇಶ ಪುನರಾವರ್ತನೆಯಾಗದಂತೆ ಅರಣ್ಯ ಇಲಾಖೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
