
ಬೆಂಗಳೂರು: ಕರ್ನಾಟಕದಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ತೀವ್ರಗೊಂಡಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವೆ ಸಚಿವ ಸ್ಥಾನ ಹಂಚಿಕೆ ಕುರಿತು ಮಹತ್ವದ ಚರ್ಚೆಗಳು ನಡೆಯುತ್ತಿವೆ. ಸಂಭಾವ್ಯ ಸಚಿವರ ಪಟ್ಟಿಯನ್ನು ಹಿಡಿದು ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರಿಗೆ ತಮ್ಮ ಶಿಫಾರಸು ಪಟ್ಟಿಯನ್ನು ಸಲ್ಲಿಸಿದ್ದಾರೆ. ಇದೇ ವೇಳೆ ಸಂಪುಟದಲ್ಲಿ ಯುವಕರು ಮತ್ತು ಹಿರಿಯ ನಾಯಕರ ನಡುವೆ ಸಮತೋಲನ ಕಾಯ್ದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಹೊಸ ‘ಏಜ್ ಬೇಸ್ಡ್ ಫಾರ್ಮುಲಾ’ ಅಳವಡಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸೂತ್ರದ ಪ್ರಕಾರ 45 ವರ್ಷದೊಳಗಿನ ಶಾಸಕರಿಗೆ ಸುಮಾರು 10 ಸಚಿವ ಸ್ಥಾನಗಳನ್ನು ಹಾಗೂ 50ರಿಂದ 70 ವರ್ಷದೊಳಗಿನ ಹಿರಿಯ ಶಾಸಕರಿಗೆ ಸುಮಾರು 20 ಸಚಿವ ಸ್ಥಾನಗಳನ್ನು ಮೀಸಲಿಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಯುವಕರು ಹಾಗೂ ಅನುಭವಿಗಳ ನಡುವೆ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಹೊಸ ತಂತ್ರಗಾರಿಕೆ ರೂಪಿಸಲಾಗಿದ್ದು, ಇದರ ಪರಿಣಾಮ ಹಲವು ಸಚಿವಾಕಾಂಕ್ಷಿಗಳಿಗೆ ನಿರಾಸೆಯಾಗುವ ಸಾಧ್ಯತೆಯೂ ಇದೆ. ಹೈಕಮಾಂಡ್ನ ಈ ನಡೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ನಾಯಕರಲ್ಲಿ ಆತಂಕ ಹೆಚ್ಚಿಸಿದ್ದು, ಹಿರಿಯರಿಗೆ ಅವಕಾಶ ತಪ್ಪಬಹುದೇ ಎಂಬ ಲೆಕ್ಕಾಚಾರವೂ ಆರಂಭವಾಗಿದೆ. ದೆಹಲಿಯಲ್ಲಿ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಸಂಪುಟ ರಚನೆಗೆ ಸಂಬಂಧಿಸಿದಂತೆ ಸರಣಿ ಸಭೆಗಳು ನಡೆಯುತ್ತಿವೆ. ಹೊಸ ಮುಖಗಳು, ಆಕ್ರಮಣಕಾರಿ ರಾಜಕೀಯ ಶೈಲಿಯ ನಾಯಕರು, ಪಕ್ಷದ ನಿಷ್ಠಾವಂತರು ಹಾಗೂ 55 ವರ್ಷದೊಳಗಿನ ನಾಯಕರ ಹೆಸರುಗಳ ಬಗ್ಗೆ ಮಾಹಿತಿ ಸಂಗ್ರಹಿಸಿರುವುದಾಗಿ ತಿಳಿದುಬಂದಿದೆ. ಸಚಿವ ಸಂಪುಟ ರಚನೆಗೆ ಅಂತಿಮ ರೂಪ ನೀಡುವ ಉದ್ದೇಶದಿಂದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ಮೊದಲ ಹಂತದಲ್ಲಿ 10ರಿಂದ 12 ಸಚಿವರ ಪಟ್ಟಿಯನ್ನು ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಸಲ್ಲಿಸಿರುವುದಾಗಿ ಹೇಳಲಾಗುತ್ತಿದೆ. ಹೈಕಮಾಂಡ್ ಪರಿಶೀಲನೆ ಬಳಿಕ ಅಂತಿಮ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.




