ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪ್ರಸಿದ್ಧ ನಾಗದೋಷ ಪರಿಹಾರ ಕ್ಷೇತ್ರವಾದ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು 2025-26ನೇ ಸಾಲಿನಲ್ಲಿ ಮತ್ತೆ ರಾಜ್ಯದ ನಂಬರ್ 1 ಶ್ರೀಮಂತ ದೇವಾಲಯವಾಗಿ ಹೊರಹೊಮ್ಮಿದ್ದು, ಈ ವರ್ಷ ಒಟ್ಟು 167 ಕೋಟಿ 89 ಲಕ್ಷ ರೂಪಾಯಿ ಆದಾಯ ಗಳಿಸಿ, ಕಳೆದ ವರ್ಷದ 155 ಕೋಟಿ ರೂಪಾಯಿಗಿಂತ ಸುಮಾರು 12 ಕೋಟಿ ಹೆಚ್ಚುವರಿ ಆದಾಯ ದಾಖಲಿಸಿ 168 ಕೋಟಿ ಗಡಿಯತ್ತ ಸಮೀಪಿಸಿದೆ. ದೇವಾಲಯದ ಪ್ರಮುಖ ಆದಾಯ ಮೂಲವಾಗಿರುವ ಹರಕೆ ಸೇವೆಗಳಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳ ಮೂಲಕವೇ 64 ಕೋಟಿಗೂ ಹೆಚ್ಚು ಆದಾಯ ಬಂದಿದ್ದು, ಕಾಣಿಕೆ ಹುಂಡಿಯಿಂದ 24 ಕೋಟಿ ರೂಪಾಯಿ, ಸಾಮಾನ್ಯ ಕಾಣಿಕೆಯಿಂದ 5 ಕೋಟಿ ರೂಪಾಯಿ ಹಾಗೂ ಹೂಡಿಕೆ ಮೇಲಿನ ಬಡ್ಡಿಯಿಂದ ಸುಮಾರು 49 ಕೋಟಿ ರೂಪಾಯಿ ಆದಾಯ ಬಂದಿದೆ. ಇದರ ಜೊತೆಗೆ ಛತ್ರಗಳ ಬಾಡಿಗೆ, ಕಟ್ಟಡ ಮತ್ತು ಅಂಗಡಿಗಳ ಬಾಡಿಗೆ, ಕೃಷಿ ತೋಟದ ಉತ್ಪನ್ನ ಹಾಗೂ ಅನ್ನಸಂತರ್ಪಣೆ ನಿಧಿ ಸೇರಿದಂತೆ ಹಲವು ಮೂಲಗಳಿಂದಲೂ ದೇವಸ್ಥಾನಕ್ಕೆ ಕೋಟ್ಯಂತರ ರೂಪಾಯಿ ಆದಾಯ ಹರಿದುಬಂದಿದೆ ಎಂದು ವರದಿಯಾಗಿದೆ.
