
ನವದೆಹಲಿ: ದೇಶಾದ್ಯಂತ ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳಿಂದ ಬೀದಿ ನಾಯಿಗಳನ್ನು (Stray Dogs) ಸಂಪೂರ್ಣವಾಗಿ ತೆರವುಗೊಳಿಸುವ ಹಾಗೂ ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಮತ್ತು ಕಠಿಣ ತೀರ್ಪು ನೀಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಉಪಸ್ಥಿತಿ ಮತ್ತು ಅವುಗಳ ಸಂಖ್ಯೆ ಹೆಚ್ಚುತ್ತಿರುವುದು ಗಂಭೀರ ಆತಂಕಕಾರಿ ವಿಚಾರ ಎಂದು ಸ್ಪಷ್ಟಪಡಿಸಿದೆ. ಬೀದಿ ನಾಯಿ ನಿಯಂತ್ರಣ ಕುರಿತು ನವೆಂಬರ್ 2025ರಲ್ಲಿ ನೀಡಿದ್ದ ತನ್ನ ಹಿಂದಿನ ಐತಿಹಾಸಿಕ ಆದೇಶವನ್ನು ಮಾರ್ಪಡಿಸಲು ಅಥವಾ ಹಿಂಪಡೆಯಲು ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಸಾರ್ವಜನಿಕ ಸ್ಥಳಗಳಿಂದ ಹಿಡಿದುಕೊಂಡು ಹೋಗುವ ಬೀದಿ ನಾಯಿಗಳಿಗೆ ಕ್ರಿಮಿನಾಶಕ (Sterilization) ಚಿಕಿತ್ಸೆ ನೀಡಿದ ನಂತರ ಅವುಗಳನ್ನು ಮತ್ತೆ ಅದೇ ಸ್ಥಳಗಳಿಗೆ ಬಿಡಬಾರದು ಎಂಬ ಹಿಂದಿನ ಆದೇಶದ ವಿರುದ್ಧ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ವಾದಿಸಿ, ಅವುಗಳನ್ನು ಸ್ಥಳಾಂತರಿಸುವುದರಿಂದ ಗೊಂದಲ ಉಂಟಾಗಿ ದಾಳಿಗಳು ಹೆಚ್ಚಾಗಬಹುದು ಎಂದು ಹೇಳಿದರೂ, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹಾಗೂ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ತ್ರಿಸದಸ್ಯ ಪೀಠವು ಈ ವಾದವನ್ನು ತಳ್ಳಿಹಾಕಿತು. ವಿಚಾರಣೆ ವೇಳೆ ಕೋರ್ಟ್ “ಮುಗ್ಧ ಮಕ್ಕಳ ಮೇಲಿನ ದಾಳಿಗಳನ್ನು ನಾವು ಕಡೆಗಣಿಸಲು ಸಾಧ್ಯವಿಲ್ಲ, ಸಾರ್ವಜನಿಕರ ಸುರಕ್ಷತೆ ಮುಖ್ಯ” ಎಂದು ತೀವ್ರ ಕಳವಳ ವ್ಯಕ್ತಪಡಿಸಿ, ಪ್ರಾಣಿ ಕಲ್ಯಾಣ ಮಂಡಳಿ ನಿಯಮಗಳಲ್ಲಿ ಹಸ್ತಕ್ಷೇಪಕ್ಕೆ ಯಾವುದೇ ಬಲವಾದ ಕಾರಣಗಳನ್ನು ಅರ್ಜಿದಾರರು ನೀಡಿಲ್ಲ ಎಂದು ತಿಳಿಸಿತು. ಜೊತೆಗೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದ ಹಾಗೂ ಹಿಂದಿನ ಕೋರ್ಟ್ ಸೂಚನೆಗಳನ್ನು ಪಾಲಿಸದ ರಾಜ್ಯ ಸರ್ಕಾರಗಳ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ದೇಶದಲ್ಲಿ ಬೀದಿ ನಾಯಿಗಳ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದರೂ ಮೂಲಸೌಕರ್ಯ ವಿಸ್ತರಣೆ ಮತ್ತು ಕ್ರಿಮಿನಾಶಕ ಹಾಗೂ ಲಸಿಕೆ ಅಭಿಯಾನಗಳು ಯೋಜಿತವಾಗಿ ನಡೆಯುತ್ತಿಲ್ಲ ಎಂಬುದನ್ನು ಕೋರ್ಟ್ ಟೀಕಿಸಿ, ಇದು ಪ್ರಾಣಿ ಜನನ ನಿಯಂತ್ರಣ ಚೌಕಟ್ಟಿನ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ಹೇಳಿತು. ರಾಜ್ಯ ಸರ್ಕಾರಗಳು ಮೊದಲೇ ದೂರದೃಷ್ಟಿಯಿಂದ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟು ಗಂಭೀರವಾಗುತ್ತಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ನ ಈ ಕಠಿಣ ನಿಲುವಿನಿಂದಾಗಿ ಇನ್ಮುಂದೆ ದೇಶಾದ್ಯಂತ ಬೀದಿ ನಾಯಿಗಳ ಹಾವಳಿ ತಡೆಯಲು ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ಯುದ್ಧೋಪಾದಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.



