
ಬೆಂಗಳೂರು: ರಾಜ್ಯ ಸರ್ಕಾರದ “6ನೇ ಗ್ಯಾರಂಟಿ” ಎಂದು ಕರೆಯಲ್ಪಡುವ ಮಹತ್ವದ ಭೂ ಮತ್ತು ಆಸ್ತಿ ಪರಿವರ್ತನಾ ಯೋಜನೆಯನ್ನು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಘೋಷಿಸಿದ್ದು, ಬೆಂಗಳೂರಿನ ನಾಗರಿಕರಿಗೆ ದೊಡ್ಡ ಬಂಪರ್ ಗಿಫ್ಟ್ ಎಂದು ವಿವರಿಸಿದ್ದಾರೆ. ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇ-ಖಾತಾ ಮತ್ತು ನಂಬಿಕೆ ನಕ್ಷೆ ಸೇರಿದಂತೆ ಈಗಾಗಲೇ ಹಲವು ಯೋಜನೆಗಳ ಜಾರಿಯ ಬಳಿಕ ಇದೀಗ ಬೆಂಗಳೂರಿಗೆ ಸೀಮಿತವಾಗಿ “ನನ್ನ ಖಾತಾ ನನ್ನ ಹಕ್ಕು” ಅಭಿಯಾನದಡಿ ಬಿ ಖಾತಾದಿಂದ ಎ ಖಾತೆಗೆ ಪರಿವರ್ತನೆ ಮಾಡಲು ಅವಕಾಶ ನೀಡಲಾಗುತ್ತಿದ್ದು, ಇದನ್ನು ಸರ್ಕಾರದ ಆರನೇ ಗ್ಯಾರಂಟಿ ಎಂದು ಹೇಳಿದ್ದಾರೆ. ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಮೇ 16, 2026ರಂದು ಈ ಅಭಿಯಾನ ಆರಂಭವಾಗಲಿದ್ದು, ನಂತರ ಪ್ರತಿ ಶನಿವಾರ ಪ್ರತಿ ವಿಧಾನಸಭಾ ಕ್ಷೇತ್ರದ 10 ಶಾಲಾ ಆವರಣಗಳಲ್ಲಿ e-Khatha open house ಮೂಲಕ ಮುಂದುವರಿಯಲಿದೆ. ಪ್ಲ್ಯಾನ್ ಇಲ್ಲದೇ ಮನೆ ನಿರ್ಮಿಸಿರುವವರಿಗೆ, ಓಸಿ ಇಲ್ಲದೇ ವಿದ್ಯುತ್ ಹಾಗೂ ನೀರಿನ ಸಂಪರ್ಕ ಸಿಗದೇ ಪರದಾಡುತ್ತಿರುವವರಿಗೆ ಈ ಯೋಜನೆ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಒಟ್ಟು ಸುಮಾರು 7 ಲಕ್ಷ ಬಿ ಖಾತೆಗಳು ಇರುವುದಾಗಿ ಹೇಳಿದ ಅವರು, ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡುವ ಮೂಲಕ ಗೈಡೆನ್ಸ್ ವ್ಯಾಲ್ಯೂ ಶೇಕಡಾ 5ರಿಂದ 2ಕ್ಕೆ ಇಳಿಸಲಾಗುವುದು ಹಾಗೂ ಸೂಕ್ತ ದಾಖಲೆ ನೀಡಿದರೆ ಆಸ್ತಿ ಪ್ರಮಾಣಪತ್ರವನ್ನು ಮನೆಗೆ ತಲುಪಿಸಲಾಗುವುದು ಎಂದಿದ್ದಾರೆ. ಅಧಿಕಾರಿಗಳು ರಜೆ ಇದ್ದರೂ ಈ ಕಾರ್ಯದಲ್ಲಿ ತೊಡಗಬೇಕು ಎಂದು ಸೂಚಿಸಿರುವ ಅವರು, ಮುಂದಿನ 100 ದಿನಗಳಲ್ಲಿ ಈ ಅವಕಾಶವನ್ನು ನಾಗರಿಕರು ಬಳಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಇದೇ ವೇಳೆ ಕೆಂಪೇಗೌಡ ಜಯಂತಿ ದಿನ “ಗ್ರೀನ್ ಬೆಂಗಳೂರು” ಕಾರ್ಯಕ್ರಮದಡಿ 15 ಲಕ್ಷ ಸಸಿಗಳನ್ನು ನೆಡುವ ಯೋಜನೆ ಘೋಷಿಸಲಾಗಿದ್ದು, ಬಿಡಿಎ 50 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಜೂನ್ 27ರಂದು ಅದ್ಧೂರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆವರೆಗೆ 33 ಕಿ.ಮೀ ಬಿಸಿನೆಸ್ ಕಾರಿಡಾರ್ ನಿರ್ಮಾಣವಾಗಲಿದ್ದು, ಭೂಮಿ ನೀಡುವ ಮಾಲೀಕರಿಗೆ 5 ರೀತಿಯ ಪರಿಹಾರ ನೀಡಲಾಗುವುದು ಹಾಗೂ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಡಿನೋಟಿಫೈ ಮಾಡಲಾಗುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.





