
ಮಂಗಳೂರು: ಕರಾವಳಿಯಲ್ಲಿ ಮಾದಕ ದ್ರವ್ಯ ಜಾಲದ ಚಟುವಟಿಕೆ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಚೆನ್ನೈನಿಂದ ಮಂಗಳೂರಿಗೆ ಸುಮಾರು ₹35 ಲಕ್ಷ ಮೌಲ್ಯದ ಹೈಡ್ರೋವಿಡ್ ಗಾಂಜಾ ಸಾಗಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನಿವಾಸಿ ಹಾಗೂ ಕುಂದಾಪುರದ ಪ್ರತಿಷ್ಠಿತ ಕಾಲೇಜೊಂದರ ಅಂತಿಮ ವರ್ಷದ BCA ವಿದ್ಯಾರ್ಥಿನಿ ಸುಹಾನ (21) ಎಂದು ಗುರುತಿಸಲಾಗಿದೆ. ಮಂಗಳವಾರ ಮುಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪಣಂಬೂರು ಎಸಿಪಿ ತಂಡ ಮತ್ತು ಮುಲ್ಕಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ಸುಮಾರು 1 ಕೆಜಿ 42 ಗ್ರಾಂ ತೂಕದ, ₹35 ಲಕ್ಷ ಮೌಲ್ಯದ ಹೈಡ್ರೋವಿಡ್ ಗಾಂಜಾ, ಮೊಬೈಲ್ ಫೋನ್ ಹಾಗೂ ಇತರೆ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸುಹಾನ ಈ ಮಾದಕ ವಸ್ತುವನ್ನು ಚೆನ್ನೈನಿಂದ ಮಂಗಳೂರಿಗೆ ತರಿಸಿಕೊಂಡು ಕಾಲೇಜು ವಿದ್ಯಾರ್ಥಿಗಳು ಹಾಗೂ ಶ್ರೀಮಂತ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಸಂಚು ರೂಪಿಸಿದ್ದಳು ಎಂಬುದು ಬಹಿರಂಗವಾಗಿದೆ. ತನಿಖೆ ವೇಳೆ ಈಕೆಯ ವಿರುದ್ಧ ಈಗಾಗಲೇ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದಲ್ಲದೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯಲ್ಲೂ ಡ್ರಗ್ಸ್ ಸಾಗಾಟ ಪ್ರಕರಣ ದಾಖಲಾಗಿರುವುದು ಪತ್ತೆಯಾಗಿದೆ. ಪ್ರಸ್ತುತ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈ ಜಾಲದ ಹಿಂದೆ ಇರುವ ಪ್ರಮುಖ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.




