
ಬೆಂಗಳೂರು: ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಫಿ ಟೌನ್ನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಚಾರ್ಜ್ ಮಾಡುವ ವೇಳೆ ಸ್ಫೋಟಗೊಂಡು 65 ವರ್ಷದ ಆಟೋ ಚಾಲಕ ಲೂರ್ದ್ ನಾಧನ್ ನಿದ್ರೆಯಲ್ಲಿಯೇ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ನಾದನ್ ಅವರು ನೆಲಮಹಡಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದು, ಅವರ ಪುತ್ರ ಫ್ರಾಂಕ್ ಅಂತೋನಿ ಹಾಗೂ ಪತ್ನಿ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ರಾತ್ರಿ ಸುಮಾರು 11 ಗಂಟೆಗೆ ಎಲೆಕ್ಟ್ರಿಕ್ ಬೈಕ್ ಅನ್ನು ಚಾರ್ಜ್ಗೆ ಹಾಕಿ ನಿದ್ರೆಗೆ ಜಾರಿದ್ದ ನಾದನ್, ಬೆಳಗಿನ ಜಾವ ಸುಮಾರು 3 ಗಂಟೆಗೆ ಬೈಕ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಗಂಭೀರವಾಗಿ ಸುಟ್ಟುಹೋಗಿದ್ದಾರೆ. ಭಾರೀ ಸ್ಫೋಟದ ಶಬ್ದ ಕೇಳಿ ಎಚ್ಚರಗೊಂಡ ಪುತ್ರ ಫ್ರಾಂಕ್ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ನಾದನ್ ಸುಟ್ಟ ಗಾಯಗಳಿಂದ ನರಳುತ್ತಿದ್ದರೆಂದು ತಿಳಿದುಬಂದಿದ್ದು, ತಕ್ಷಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಧಿವಿಜ್ಞಾನ ತಜ್ಞರು ಸ್ಫೋಟದ ಕಾರಣವನ್ನು ಪರಿಶೀಲಿಸುತ್ತಿದ್ದು, ಬ್ಯಾಟರಿ ಹೆಚ್ಚು ಬಿಸಿಯಾಗಿರುವ ಸಾಧ್ಯತೆ ಅಥವಾ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹಲಸೂರು ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.




