
ಶೃಂಗೇರಿ: ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಭಾರೀ ವಿವಾದ ಉಂಟಾಗಿದ್ದು, ಹೈಕೋರ್ಟ್ ಆದೇಶದಂತೆ ನಡೆದ ಮರು ಎಣಿಕೆ ಬಳಿಕ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆದ್ದಿದ್ದಾರೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದ ಹಿನ್ನೆಲೆ, ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮರು ಎಣಿಕೆಗಾಗಿ ಬಿಜೆಪಿ ಅಭ್ಯರ್ಥಿ ಕೋರ್ಟ್ ಮೊರೆ ಹೋಗಿದ್ದರಿಂದ ಮಾರ್ಚ್ 6ರಂದು ಹೈಕೋರ್ಟ್ ನಿರ್ದೇಶನ ನೀಡಿ, ಮೇ 2ರಂದು ಮರು ಎಣಿಕೆ ನಡೆಸಲು ಅನುಮತಿ ನೀಡಿತ್ತು. 2023ರಲ್ಲಿ ಟಿ.ಡಿ. ರಾಜೇಗೌಡ ಅವರಿಗೆ 569 ಅಂಚೆ ಮತಗಳು ಲಭಿಸಿದ್ದರೆ, ಮರು ಎಣಿಕೆಯಲ್ಲಿ ಕೇವಲ 314 ಮತಗಳನ್ನು ಮಾತ್ರ ಮಾನ್ಯ ಎಂದು ಪರಿಗಣಿಸಲಾಗಿದ್ದು, 255 ಮತಗಳು ಅಮಾನ್ಯವಾಗಿರುವುದು ಅನುಮಾನಾಸ್ಪದ ಎಂದು ಹೇಳಿದರು. ಒಟ್ಟು 692 ಅಂಚೆ ಮತಗಳಲ್ಲಿ ಮರು ಎಣಿಕೆಯಲ್ಲಿ 690 ಮಾತ್ರ ಕಂಡುಬಂದಿದ್ದು, ರಾಜೇಗೌಡ ಅವರಿಗೆ 255 ಮತಗಳು ಕಡಿಮೆಯಾಗಿರುವುದರಿಂದ ಬಿಜೆಪಿ ಕ್ರಿಮಿನಲ್ ಕಾನ್ಸ್ಪರೆನ್ಸಿ ಮೂಲಕ ವೋಟ್ ಚೋರಿ ಮಾಡಿದೆ ಎಂದು ಆರೋಪಿಸಿದರು. 255 ಮತಗಳನ್ನು ವ್ಯವಸ್ಥಿತವಾಗಿ ತಿದ್ದುಪಡಿ ಮಾಡಲಾಗಿದ್ದು, ಸಣ್ಣ ಮಾರ್ಕ್ ವ್ಯತ್ಯಾಸದ ನೆಪದಲ್ಲಿ ಅವನ್ನು ಅಮಾನ್ಯಗೊಳಿಸಲಾಗಿದೆ, ಹಿಂದಿನ ರಿಟರ್ನಿಂಗ್ ಅಧಿಕಾರಿಗಳು ಮಾನ್ಯ ಎಂದಿದ್ದ ಮತಗಳನ್ನು ಈಗ ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದರು. ಇದು ಕೇವಲ ವೋಟ್ ಚೋರಿಯಷ್ಟೇ ಅಲ್ಲ, ವೋಟ್ ಡಕಾಯಿತಿ ಎಂದು ಗುಡುಗಿದ ಸಿಎಂ, ಚುನಾವಣಾ ದಾಖಲೆಗಳನ್ನು ಟ್ರಂಕ್ನಲ್ಲಿ ಸಾಗಿಸುವ ಸಿಬ್ಬಂದಿ ಮೂಲಕವೇ ತಿದ್ದುಪಡಿ ಮಾಡಲಾಗಿದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಇದ್ದ ಸಮಯದಲ್ಲಿ ಈ ತಿದ್ದುಪಡಿ ನಡೆದಿರುವ ಸಾಧ್ಯತೆ ಇದೆ ಎಂದು ಆರೋಪಿಸಿದ ಅವರು, ಅಧಿಕಾರಿಗಳು ಮತ್ತು ಚುನಾವಣಾ ತಜ್ಞರೊಂದಿಗೆ ಚರ್ಚಿಸಿದ ನಂತರ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದರು. ರಾಜೇಗೌಡ, ಜೀವರಾಜ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ಮೂರನೇ ಸುತ್ತಿನಲ್ಲಿ 170 ಅಂಚೆ ಮತಗಳು ಅಮಾನ್ಯಗೊಂಡಿದ್ದು, “ಹಣ್ಣು ತಿಂದವನು ತಪ್ಪಿಸಿಕೊಂಡ, ಸಿಪ್ಪಿ ತಿಂದವನು ಸಿಕ್ಕಿಹಾಕಿಕೊಂಡಂತಾಗಿದೆ” ಎಂದು ಟೀಕಿಸಿದ ಅವರು, “ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು” ಎನ್ನುವಂತೆ ಬಿಜೆಪಿ ನಡೆದುಕೊಂಡಿದೆ ಎಂದರು. ಇಡೀ ದೇಶದಲ್ಲೇ ಇಂತಹ ಕ್ರಿಮಿನಲ್ ಚಟುವಟಿಕೆ ಇದೇ ಮೊದಲ ಬಾರಿ ನಡೆದಿದ್ದು, ಸಮಗ್ರ ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.





