
ಬೆಂಗಳೂರು: ಕರ್ನಾಟಕದ 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಐತಿಹಾಸಿಕ ದಾಖಲೆಯಾಗಿ ಶೇ. 94.10 ಉತ್ತೀರ್ಣತೆ ಸಾಧನೆಯಾಗಿದೆ. ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಒಟ್ಟು 7,70,209 ವಿದ್ಯಾರ್ಥಿಗಳು ಪರೀಕ್ಷೆ ಬರೆದವರಲ್ಲಿ 7,24,794 ಮಂದಿ ಉತ್ತೀರ್ಣರಾಗಿದ್ದಾರೆ, ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಪಡೆದಿವೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು 625ಕ್ಕೆ 625 ಅಂಕಗಳನ್ನು ಬೆಳಗಾವಿಯ ರೂಪ ಚೆನ್ನಗೌಡ ಪಾಟೀಲ್, ಹಾಸನದ ಜಾನವಿ ಹಾಗೂ ಉತ್ಸವ್ ಪಾಟೀಲ್ ಪಡೆದು ರಾಜ್ಯ ಟಾಪರ್ಗಳಾಗಿ ಹೊರಹೊಮ್ಮಿದ್ದಾರೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಪರೀಕ್ಷೆಗೆ ರಾಜ್ಯಾದ್ಯಂತ 9,02,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಅದರಲ್ಲಿ 8,12,855 ಮಂದಿ ಪ್ರಥಮ ಬಾರಿ, 62,845 ಮಂದಿ ಪುನರಾವರ್ತಿತ ಹಾಗೂ 27,189 ಮಂದಿ ಖಾಸಗಿ ಅಭ್ಯರ್ಥಿಗಳಾಗಿದ್ದರು. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು karresults.nic.in ಅಥವಾ kseab.karnataka.gov.in ವೆಬ್ಸೈಟ್ಗಳಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ವೀಕ್ಷಿಸಬಹುದಾಗಿದ್ದು, ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕವೂ ಫಲಿತಾಂಶ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ, ಜೊತೆಗೆ ಡಿಜಿಲಾಕರ್ ಮತ್ತು ಕರ್ನಾಟಕ ಒನ್ ಅಪ್ಲಿಕೇಶನ್ನಲ್ಲೂ ಅಂಕಪಟ್ಟಿ ಲಭ್ಯವಾಗಲಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.




