
ಕಾರ್ಕಳ: ಕಾರ್ಕಳ ಪುರಸಭೆಯಲ್ಲಿ ಬುಧವಾರ ನಡೆದ ಸಭೆಯೊಂದರಲ್ಲಿ ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕ ಸುಬ್ರಮಣ್ಯ ಸೆಟ್ಟಿ ಮಹಿಳಾ ಸಿಬ್ಬಂದಿಯನ್ನು ಅವಮಾನಿಸಿ, ಏಕವಚನದಲ್ಲಿ ನಿಂದಿಸಿ, ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಂಜೆ 5.15ರ ಸುಮಾರಿಗೆ ಪುರಸಭೆ ಕಚೇರಿಗೆ ಆಗಮಿಸಿದ ಯೋಜನಾ ನಿರ್ದೇಶಕರ ನೇತೃತ್ವದ ತಂಡ, ಕಚೇರಿ ಸಮಯ ಮುಗಿದ ಬಳಿಕವೂ ಸಿಬ್ಬಂದಿಯನ್ನು ತೆರಳದಂತೆ ಸೂಚಿಸಿ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದೆ ಎನ್ನಲಾಗಿದೆ. ಪೌರಕಾರ್ಮಿಕರ ಕೊರತೆಯ ನಡುವೆಯೂ ನಗರ ಸ್ವಚ್ಛತೆ, ಮನೆ-ಮನೆ ಕಸ ಸಂಗ್ರಹಣೆ, ನಗರ ಸುಂದರೀಕರಣ ಹಾಗೂ ಚರಂಡಿ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಸಿಬ್ಬಂದಿ ವಿವರಿಸುತ್ತಿದ್ದ ವೇಳೆ, ಮಹಿಳಾ ಸಿಬ್ಬಂದಿಯೊಬ್ಬರನ್ನು ಏಕವಚನದಲ್ಲಿ ಬೈದು ನಿಂದಿಸಿದ್ದು ಮಾತ್ರವಲ್ಲದೆ, “ನಿನ್ನನ್ನು ಇಲ್ಲಿಂದ ಓಡಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತನ್ನ ಕಂಪ್ಯೂಟರ್ನಲ್ಲಿದ್ದ ಇಂಜಿನಿಯರಿಂಗ್ ವಿಭಾಗದ ಕಡತಗಳು ಉದ್ದೇಶಪೂರ್ವಕವಾಗಿ ಡಿಲೀಟ್ ಆಗಿವೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಮುಖ್ಯಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ, ಸಭೆಯ ವೇಳೆ ದೂರು ನೀಡಿದ ಅದೇ ಮಹಿಳಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಅವಮಾನಿಸಲಾಗಿದೆ ಎಂದು ತಿಳಿದುಬಂದಿದೆ. ರಾತ್ರಿ 8.30 ಆದರೂ ಸಿಬ್ಬಂದಿ ಮನೆಗೆ ಮರಳದ ಕಾರಣ ಕುಟುಂಬಸ್ಥರು ಪುರಸಭೆ ಕಚೇರಿಗೆ ಆಗಮಿಸಿದಾಗ ಸಭೆ ಇನ್ನೂ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಸಭೆ ಮುಗಿದ ಬಳಿಕ ಅಧಿಕಾರಿಗಳು ತಮ್ಮ ಸರ್ಕಾರಿ ವಾಹನಗಳಲ್ಲಿ ತೆರಳಿದರೆ, ದೂರದ ಗ್ರಾಮಗಳಿಗೆ ತೆರಳಬೇಕಿದ್ದ ಮಹಿಳಾ ಸಿಬ್ಬಂದಿ ಸೇರಿದಂತೆ ಹಲವರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡಿದರೆಂದು ಆರೋಪಿಸಲಾಗಿದೆ. ಸಾರ್ವಜನಿಕರು ಹಾಗೂ ಸ್ಥಳೀಯರ ನೆರವಿನಿಂದ ಸಿಬ್ಬಂದಿ ಮನೆ ತಲುಪುವಂತಾಯಿತು ಎನ್ನಲಾಗಿದೆ. ಈ ಹಿಂದೆಯೂ ಪುರಸಭೆ ಸಿಬ್ಬಂದಿ, ವಿಶೇಷವಾಗಿ ಮಹಿಳಾ ಸಿಬ್ಬಂದಿಯನ್ನು ಕಚೇರಿಗೆ ಕರೆಸಿ ನಿಂದಿಸುವ ಘಟನೆಗಳು ನಡೆದಿವೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ.




