
ಚಿಕ್ಕಮಗಳೂರು: ರಾಜ್ಯಾದ್ಯಂತ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ನಡೆಯುವ ಸಿಇಟಿ ಪರೀಕ್ಷೆ ಏಪ್ರಿಲ್ 23ರಿಂದ ಆರಂಭವಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿರುವ ನಡುವೆಯೇ ಚಿಕ್ಕಮಗಳೂರು ನಗರದ ಎಂ.ಇ.ಎಸ್. ಕಾಲೇಜಿನಲ್ಲಿ ಮೂಗು ಬೊಟ್ಟು ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಶಾಕ್ ಎದುರಾಗಿದೆ. ಮೆಟಲ್ ಧರಿಸಬಾರದು ಎಂಬ ಪರೀಕ್ಷಾ ನಿಯಮದ ಹಿನ್ನೆಲೆಯಲ್ಲಿ ಗೇಟ್ನಲ್ಲೇ ಅವರನ್ನು ಸಿಬ್ಬಂದಿ ತಡೆದು ನಿಲ್ಲಿಸಿ, ನಂತರ ಮೂಗು ಬೊಟ್ಟಿಗೆ ಗಮ್ ಟೇಪ್ ಅಂಟಿಸಿ ಪರೀಕ್ಷಾ ಕೊಠಡಿಗೆ ಕಳುಹಿಸಿದ ಘಟನೆ ನಡೆದಿದೆ, ಇದರಿಂದ ಹಲವು ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಚಿಕ್ಕಮಗಳೂರು ಡಿಡಿಪಿಯು ಮಂಜುಳಾ ಮಾತನಾಡಿ, ಸರ್ಕಾರದ ಆದೇಶ ಪಾಲನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಬಿಗಿ ಭದ್ರತೆಯೊಂದಿಗೆ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಅಕ್ರಮಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಕೆಇಎ ಕೈಗೊಂಡಿದೆ, ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಅಥವಾ ಕಾಲೇಜು ಗುರುತಿನ ಚೀಟಿ ತರಬೇಕು, ಪರೀಕ್ಷೆಗೆ ಕನಿಷ್ಠ 30 ನಿಮಿಷ ಮುಂಚಿತವಾಗಿ ಕೇಂದ್ರದಲ್ಲಿ ಹಾಜರಾಗಬೇಕು, ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಬ್ಲೂಟೂತ್, ಕ್ಯಾಲ್ಕುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ತರಲು ನಿಷೇಧವಿದ್ದು, ವಸ್ತ್ರಸಂಹಿತೆ ಪಾಲನೆ ಕಡ್ಡಾಯವಾಗಿದ್ದು ಸರಳ ಉಡುಪು ಧರಿಸಬೇಕು, ಪೂರ್ಣ ತೋಳಿನ ಶರ್ಟ್, ಟೋಪಿ, ದಪ್ಪ ಸೋಲ್ ಶೂಗಳು ಹಾಗೂ ಕಿವಿಯೋಲೆ, ಉಂಗುರ, ಕಡಗ ಸೇರಿದಂತೆ ಆಭರಣಗಳಿಗೆ ಅವಕಾಶವಿಲ್ಲ, ಜೊತೆಗೆ ಒಎಂಆರ್ ಶೀಟ್ನಲ್ಲಿ ಉತ್ತರಿಸಲು ನೀಲಿ ಅಥವಾ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ ಮಾತ್ರ ಬಳಸಬೇಕು ಎಂದು ಸೂಚಿಸಲಾಗಿದೆ.




