ಇವತ್ತು ನೋಟ್ಸ್ ಬರ್ದಿಲ್ಲ ಅಂದ್ರೆ ಮೇಡಂ ನಮ್ಮನ್ನು ಸಾಯಿಸ್ತಾರೆ, ನನ್ನ ಹುಡುಗ ದೇವಸ್ಥಾನದಲ್ಲಿ ಕಾಯ್ತಾ ಇದಾನೆ, ಹೋಗದೇ ಇದ್ರೆ ಅವನಿಗೆ ಸಿಟ್ಟು ಬರುತ್ತೆ, ಇವತ್ತು ಆಫೀಸಿಗೆ ಲೇಟಾದ್ರೆ ಬಾಸ್ ಉಗಿದು ಉಪ್ಪಿನಕಾಯಿ ಹಾಕ್ತಾನೆ, ಇಷ್ಟೋತ್ತಾದ್ರು ಮನೇಗೆ ಹೋಗಿಲ್ಲ ಅಂದ್ರೆ ನನ್ ಗಂಡ ಅಷ್ಟೆ ಮತ್ತೆ.., ಇಂತಹ ಮಾತುಗಳನ್ನ ನಾವು ನೀವು ಆಡಿರ್ತೀವಿ, ಇಲ್ಲಾ ಕೇಳಿರ್ತೀವಿ ಅಲ್ವಾ? ಇದನ್ನ ಯಾಕೆ ಪ್ರಸ್ತಾಪ ಮಾಡಿದೆ ಅಂದ್ರೆ ನಾವು ನಮ್ಮ ಬದುಕಿನಲ್ಲಿ ನಮ್ಮ ಸಂತೋಷಕ್ಕೆ ಅಂತ ಮಾಡುವ ಕೆಲಸಗಳು ಕಡಿಮೆ! ಈಗ ನೋಡಿ, ಕ್ಲಾಸಲ್ಲಿ ಫಸ್ಟ್ ಬರೋ ಹುಡುಗಿ ನೋಟ್ಸ್ ಬರಿಯುವಾಗ ಮೇಡಂ ಸಾಯಿಸ್ತಾರೆ ಅಂತಲೇ ಬರೆದು ಮುಗಿಸುತ್ತಾಳೆಯೇ ವಿನಃ ಇದನ್ನ ಬರೆದ್ರೆ ನಾನು ಫಸ್ಟ್ ಬರದ್ತೀನಿ ಅಂತ ಯೋಚಿಸುವುದೇ ಇಲ್ಲ! ಇನ್ನು ಅವರಿಬ್ಬರು ಮಹಾನ್ ಪ್ರೇಮಿಗಳು, ಒಬ್ಬರನ್ನೊಬ್ಬರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತೀವಿ ಅಂತಾರೆ, ಅರ್ಥ ಮಾಡಿಕೊಂಡಿದೀವಿ ಅಂತಾರೆ, ಆದ್ರೆ ಕಾಯುತ್ತಿರುವ ಹುಡುಗನನ್ನು ಭೇಟಿಗೆ ಹೊರಟ ಹುಡುಗಿ ತಾನು ಹೋಗದೇ ಇದ್ರೆ ಅವನಿಗೆ ಸಿಟ್ಟು ಬರುತ್ತೆ ಅಂತ ಹೋಗ್ತಾಳೆಯೇ ವಿನಃ ಕಾಯುತ್ತಿರುವ ಹುಡುಗನನ್ನು ನೋಡದೇ ಇದ್ರೆ ನಾನವನ್ನ ಮಿಸ್ ಮಾಡ್ಕೋತೀನಿ ಅಂತ ಹೋಗಲ್ಲ! ಹಾಗೆಯೇ ಆಫೀಸಿಗೆ ಲೇಟಾದ್ರೆ ಬಾಸ್ ಉಗಿತಾನೆ ಅಂದ್ಕೊಳ್ಳೋ ವ್ಯಕ್ತಿಗೆ ನನ್ನ ಪಾಲಿನ ಕೆಲಸ ವಿಳಂಬವಾಗುತ್ತೆ ಅನ್ನೋ ಕಾಳಜಿ ಇರುವುದಿಲ್ಲ. ಆತ ಕೆಲಸಕ್ಕೆ ಅರ್ಜಿ ಹಾಕಿ, ಸಂದರ್ಶನಕ್ಕೆ ಕರೆದ ದಿನ ಆಫೀಸು ತೆರೆಯುವ ಮುಂಚೆ ಗೇಟಿನ ಬಳಿಯೇ ಕಾಯುತ್ತಾ ನಿಂತಿದ್ದ, ನಿಷ್ಠೆ, ಸಮಯ, ಪ್ರಜ್ಞೆ ಕೆಲಸ ಸಿಕ್ಕ ಮೇಲೆ ಇರುವುದಿಲ್ಲ! ಅದೇ ರೀತಿ ತಡವಾದ್ರೆ ಗಂಡ ಬೈತಾನೆ ಅಂತ ಮನೆ ಸೇರೋ ಹೆಂಡತಿಗೆ ಗಂಡ ಮನೇಲಿ ಒಬ್ಬನೆ ಇದ್ದಾನೆ ಅನ್ನೋ ಕಾಳಜಿ ಇರುವುದಿಲ್ಲ! ಈಗ ನಾನು ಹೇಳಿದ ಅಂಶಗಳನ್ನು ಗಮನಿಸಿ ನೋಡಿ ನಾವೆಲ್ಲ ಯಾರದೋ ಮೇಲಿನ ಅಂಜಿಕೆಗೆ ಒಳಗಾಗಿಯೇ ನಮ್ಮ ಕರ್ತವ್ಯ (?) ನಿರ್ವಹಿಸುತ್ತೇವೆಯೇ ಹೊರತು, ನಮ್ಮ ಖುಷಿಯಿಂದ ಮಾಡುವುದಿಲ್ಲ ಅಲ್ವಾ! ಪ್ರೀತ್ಸೋ ಹುಡುಗನ ಸಿಟ್ಟು, ಹುಡುಗಿಯನ್ನು ಅವನನ್ನು ಭೇಟಿ. ಮಾಡಲು ಕಾರಣವಾಗುತ್ತದೆಯೇ ಹೊರತು ಅವನ ಪ್ರೀತಿಯಲ್ಲ! ಬಾಸೆಂಬ ಜೀವಿಗೆ ಹೆದರಿ ಆಫೀಸಿಗೆ ಸರಿಯಾದ ಸಮಯಕ್ಕೆ ಹಾಜರಾಗೋ ಜನರಿದ್ದಾರೆಯೇ ಹೊರತು, ತಮ್ಮ ಕೆಲಸದ ಮೇಲಿನ ನಿಷ್ಠೆಯಿಂದಲ್ಲ! ಮನೆಯಲ್ಲಿ ಒಬ್ಬನೇ ಇರೋ ಗಂಡನನ್ನ ಬಿಟ್ಟಿರಲು ನಂಗೆ ಸಾಧ್ಯಾವಾಗ್ತಾ ಇಲ್ಲ ಆತನನ್ನು ನೋಡುವ ಕಾತರ ಜಾಸ್ತಿಯಾಗಿದೆ ಅನ್ನೋ ಕಾರಣಕ್ಕೆ ಹೆಂಡತಿ ದಾವಂತದಿಂದ ಮನೆ ಸೇರಿಕೊಳ್ಳುವುದಿಲ್ಲ! ಆದರೆ ಇವರೆಲ್ಲ ತಮ್ಮ ಅಮರ ಪ್ರೇಮಿಗಳು, ಪ್ರಾಮಾಣಿಕ ಕೆಲಸಗಾರರು, ಆದರ್ಶ ದಂಪತಿಗಳು ಎಂದುಕೊಂಡಿರುತ್ತಾರೆ! ಇದು ಯಾರೋ ಒಬ್ಬರು ವಿಷಯಕ್ಕೆ ಸಂಬಂಧಿಸಿದ್ದಲ್ಲ ಪ್ರತಿಯೊಬ್ಬರ ಬದುಕಿನ ಆಲೋಚನೆಗಳು ಬಹುತೇಕ ಹೀಗೆ ಇರುತ್ತದೆ. ಹಾಗಂತ ಅವರಿಗೆ ಪ್ರೇಮಿಯ ಮೇಲೆ, ಕೆಲಸದ ಮೇಲೆ, ಗಂಡನ ಮೇಲೆ ಅಭಿಮಾನ ಇಲ್ಲ ಎಂದಲ್ಲ, ತಮಾಷೆ ಗೊತ್ತಾ ಹುಡುಗ ದೇವಸ್ಥಾನದ ಬಳಿ ಕಾಯದೇ ಇದ್ರೆ ಹುಡುಗಿ ಚಡಪಡಿಸಿ ಹೋಗ್ತಾಳೆ, ಬಾಸ್ ಅವನ ಕೆಲಸ ಮುಚ್ಚಿದ್ರೆ ಬದುಕೇ ಸರ್ವನಾಶವಾಗಿ ಹೋಯ್ತು ಅಷ್ಟು ಕಷ್ಟ ಪಟ್ಟು ಕೆಲ್ಸ್ ಮಾಡ್ತಾ ಇದ್ದೆ, ಇವತ್ತು ನಾನು ಹೀಗಿದೀನಿ ಅಂದ್ರೆ ಅದ್ಕೆ ಆ ಬಾಸ್ ಮತ್ತು ಆಫೀಸೇ ಕಾರಣ ಅನ್ನೋ ರೀತಿ ಮಾತಾಡಿ ಬಿಡ್ತಾರೆ! ಗಂಡ ಕೇರ್ಲೆಸ್ ಮಾಡಿದ್ರೆ ಹೆಂಡತಿಗೆ ಸಹಿಸೋಕಾಗಲ್ಲ ಕುಳಿತಲ್ಲೆ ಕನಲಿ ಹೋಗ್ತಾಳೆ, ನಮ್ಮ ಬದುಕಿನ ರೊಟೀನುಗಳೇ ಹೀಗೆ ನಮಗಿಷ್ಟ ಇಲ್ಲ ಇಲ್ಲ ಅಂತಾನೇ ಅಪ್ಪಿಕೊಂಡು ಬಿಡ್ತೀವಿ. ಇದ್ದಾಗ ಅದರ ಬೆಲೆ ಗೊತ್ತಾಗೋದೆ ಇಲ್ಲ ಕಳಕೊಂಡ ಮೇಲೆ ಪರಿತಪಿಸ್ತೀವಿ ಇದೊಂಥರ ಪುಟ್ಟ ಮಗುವೊಂದು ತಾಯಿಯ ಮಡಿಲನ್ನು ಒದೆಯುತ್ತಾ ಮೊಲೆಯುಡಂತೆ, ಕರುವೊಂದು ಕೆಚ್ಚಲಿಗೆ ಗುದ್ದುತ್ತಾ ಹಾಲು ಕುಡಿದಂತೆ! ಬದುಕು ತಾಯಿಯಂತಹದು ಅದು ನಮ್ಮನ್ನು ಸಲಹುತ್ತದೆ ಪೊರೆಯುತ್ತದೆ. ಒಪ್ಕೋತಿರಾ ಅಲ್ವಾ?
