ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 4 ವರ್ಷದ ಹೆಣ್ಣು ಚಿರತೆ ಬಿದ್ದಿದೆ. ಲಿಂಗದಹಳ್ಳಿ ಹಾಗೂ ಉಡೇವಾ ಸುತ್ತಮುತ್ತ ಸಂಚಾರ ಮಾಡುತ್ತಿದ್ದ ಚಿರತೆ 8ಕ್ಕೂ ಹೆಚ್ಚು ನಾಯಿಗಳನ್ನು ಬೇಟೆಯಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಚಿರತೆ ಸಂಚಾರದಿಂದ ಜನರು ಮನೆಯಿಂದ ಹೊರಬರಲು ಕೂಡ ಹಿಂದೇಟು ಹಾಕುವ ಪರಿಸ್ಥಿತಿ ಉಂಟಾಗಿದ್ದು, ಸ್ಥಳೀಯರು ಕೂಡಲೇ ಚಿರತೆಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದರು. ಅಂತಿಮವಾಗಿ ತರೀಕೆರೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಸೆರೆಯಾಗಿದ್ದು, ಆತಂಕದಲ್ಲಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
