ಶೃಂಗೇರಿ: ದಿನಾಂಕ ಅಕ್ಟೋಬರ್ 31, ಶುಕ್ರವಾರದಂದು ಶೃಂಗೇರಿ ತಾಲೂಕಿನ ಕೆರೆಕಟ್ಟೆಯ ಬಳಿ ಸಂಭವಿಸಿದ ಕಾಡಾನೆ ದಾಳಿಯಿಂದ ಸ್ಥಳೀಯ ರೈತರಾದ ಶ್ರೀ ಉಮೇಶ್ ಮತ್ತು ಶ್ರೀ ಹರೀಶ್ ಅವರು ಮೃತರಾದ ಘಟನೆಯು ಅತ್ಯಂತ ವಿಷಾದನೀಯ. ಈ ದುರಂತಕ್ಕೆ ಸ್ಪಂದಿಸಿ, ಸಂತ್ರಸ್ತ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲಲು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ನಿರ್ದೇಶನದಂತೆ ಶ್ರೀ ಮಠದ ಹಿರಿಯ ಆಡಳಿತ ವರ್ಗದವರು, ಮೃತರ ಕುಟುಂಬಸ್ಥರ ಮನೆಗಳಿಗೆ ತೆರಳಿ, ಸಾಂತ್ವನವನ್ನು ತಿಳಿಸಿ, ಶ್ರೀಶಾರದಾಪರಮೇಶ್ವರಿಯ ಅನುಗ್ರಹದಿಂದ ಮುಂದೆ ಆ ಕುಟುಂಬಗಳಿಗೆ ಸಕಲ ವಿಧವಾದ ಶ್ರೇಯಸ್ಸು ಲಭಿಸಲೆಂದು ಮತ್ತು ತಾಯಿಯ ಶ್ರೀರಕ್ಷೆಯು ಸದಾ ಕಾಲವೂ ಇರಲೆಂದು ಜಗದ್ಗುರುಗಳ ಆಶೀರ್ವಾದದ ರೂಪದಲ್ಲಿ ಫಲಮಂತ್ರಾಕ್ಷತೆ ಮತ್ತು ಶ್ರೀ ಶಾರದಾ ಪ್ರಸಾದವನ್ನು ನೀಡಿದರು. ಇದೇ ಸಂದರ್ಭದಲ್ಲಿ, ಶ್ರೀ ಮಠದ ವತಿಯಿಂದ ಮೃತರ ಕುಟುಂಬಗಳಿಗೆ ತಲಾ ₹2,50,000/-, ಡಿಡಿ ಮುಖಾಂತರ, ಸಹಾಯಧನದ ರೂಪದಲ್ಲಿ,ಜಗದ್ಗುರುಗಳ ಆದೇಶದಂತೆ ಹಸ್ತಾಂತರಿಸಲಾಯಿತು.
