
ಅದೊಂದು ಸುದ್ದಿ ತುಂಬಾ ಹಿಂಸೆ ಅನಿಸಿಬಿಟ್ಟಿದೆ!
ಇಬ್ಬರು ಗಂಡ ಹೆಂಡತಿ ತನ್ನಿಬ್ಬರು ಮಕ್ಕಳಿಗೆ ವಿಷ ಹಾಕಿ ತಾವು ವಿಷ ಸೇವಿಸಿದ್ದಾರೆ. ದುರಂತ ಎಂದರೆ ಪುಟಾಣಿ ಮಕ್ಕಳಿಬ್ಬರು ಬದುಕಿದ್ದಾರೆ. ಗಂಡ ಹೆಂಡತಿ ಬದುಕಿಲ್ಲ. ಮಕ್ಕಳು ತಬ್ಬಲಿಗ ಳಾಗಿಬಿಟ್ಟಿವೆ! ಇವತ್ತು ನೀವು ಆ ಊರಿಗೆ ಹೋದರೆ ಅಲ್ಲಿನ ಪ್ರತಿಯೊಬ್ಬರೂ ಅನುಕಂಪದ ಮಾತಾಡುತ್ತಾರೆ. ಛೇ ಛೇ ಹೀಗಾಗಬಾರದಿತ್ತು ಅಂತ ಮರುಗುತ್ತಾರೆ. ಇಷ್ಟಕ್ಕೂ ಆ ಕುಟುಂಬ ಹಾಗೆ ಆತ್ಮಹತ್ಯೆಗೆ ಮುಂದಾಗಿದ್ದು ಯಾಕೆ ಗೊತ್ತಾ? ಬದುಕು ಸಾಗಿಸಲು ಕಷ್ಟವಾಗಿ ಮನನೊಂದು ಸಾವಿನ ದಾರಿ ಹುಡುಕಿಕೊಂಡಿದ್ದಾರೆ! ಅವರು ಹೇಡಿಗಳು. ಈ ಜಗತ್ತಿನಲ್ಲಿ ಯಾರ ಬದುಕು ಕೂಡ ಬದುಕಲಾರದಷ್ಟು ಕಷ್ಟದಲ್ಲಿರುವುದಿಲ್ಲ. ನೀವು ಸುತ್ತಲಿನ ಪ್ರಪಂಚವನ್ನೊಮ್ಮೆ ಕಣ್ತೆರೆದು ನೋಡಿ. ನಿಮಗಿಲ್ಲಿ ಬುದ್ದಿ ಮಾಂದ್ಯರು, ಎರಡು ಕಾಲಿಲ್ಲದವರು, ಕಣ್ಣಿಲ್ಲದವರು, ಅಷ್ಟೇಕೆ ಯಾವುದಾದರು ದೊಡ್ಡ ಆಸ್ಪತ್ರೆಯೊಳಕ್ಕೊಮ್ಮೆ ಹೊಕ್ಕು ಬನ್ನಿ. ಅಲ್ಲಿ ಸ್ಪರ್ಶಜ್ಞಾನವಿಲ್ಲದೆ ಕೇವಲ ಜೀವ ಮಾತ್ರ ಇಟ್ಟುಕೊಂಡು ಉಸಿರಾಡುತ್ತಿರುವವರು ಕಾಣಿಸುತ್ತಾರೆ. ಸುಮ್ನೆ ಅವರ ಬಳಿ ಹೋಗಿ ಕೇಳಿ ನಿಮಗೆ ಬದುಕು ಸಾಕೆನಿಸಿದಿಯಾ ಅಂತಾ? ಊಹುಂ, ಅವರಿಗೆ ಬದುಕು ಸಾಕು ಎನಿಸಿರುವುದಿಲ್ಲ. ವಿಧಿಯ ಬಗ್ಗೆ ಕಂಪ್ಲೆಂಟಿರಬಹುದು, ಆದರೆ ಅವರು ಸಾವಿನೊಂದಿಗಿನ ಮೈತ್ರಿಗೆ ಸಿದ್ಧವಿರುವುದಿಲ್ಲ! ಅದು ಬದುಕುವ ಛಲ! ಇಷ್ಟಕ್ಕೂ ಕೆಲವರಿಗೆ ಬದುಕು ದುಸ್ತರ ಅನಿಸುವುದು ಯಾಕೆ ಗೊತ್ತಾ..? ಈ ದರಿದ್ರ ಸಮಾಜದ ಕೆಟ್ಟ ಪ್ರಶ್ನೆಗಳಿಂದ. ನಿಮಗೊಂದು ಉದಾಹರಣೆ ಹೇಳ್ತೀನಿ, ಮದುವೆ ಮನೆಯೊಂದಕ್ಕೆ ಒಬ್ಬಾಕೆ ರೋಲ್ಡ್ಗೋಲ್ಡ್ ಸರ ಹಾಕಿಕೊಂಡು ಬಂದಿರುತ್ತಾಳೆ. ಅಲ್ಲಿ ಒಂದಿಬ್ಬರು ಹೆಂಗಸರು ಕೆಣಕುವಂತೆ ಇದೇನು ಚಿನ್ನದ್ದಾ ಅಂತ ರಾಗವೆಳೆದು ಬಿಡುತ್ತಾರೆ. ಅಂತಹ ಮಾತುಗಳು ಅದೆಷ್ಟು ನೋವು ಕೊಡುತ್ತದೆಂದು ಅನುಭವಿಸಿದವರಿಗೆ ಮಾತ್ರ ಗೊತ್ತಾಗುತ್ತದೆ. ಕೆಲವು ಸಲ ನಾವು ಕೂಡ ಹೀಗೆ ಇನ್ನೊಬ್ಬರ ಕುರಿತು ಕೆಟ್ಟ ಕುತೂಹಲ ತೋರಿಸಿರುತ್ತೇವೆ. ನಮ್ಮ ಈ ಕುತೂಹಲದ ಪ್ರಶ್ನೆಗಳು ಎದುರಿನವರ ಮನಸ್ಸನ್ನು ಘಾಸಿಗೊಳಿಸುತ್ತದೆ, ಅವಮಾನಕ್ಕೊಳಪಡಿಸುತ್ತದೆ ಅನ್ನುವ ಕಲ್ಪನೆಯೇ ಇರುವುದಿಲ್ಲ. (ಕೆಲವರು ಉದ್ದೇಶ ಪೂರ್ವಕವಾಗಿಯೇ ಅವಮಾನಿಸುತ್ತಾರೆ!) ಹೆಚ್ಚಿನ ಸಲ ಬದುಕು ಕಷ್ಟ ಎನಿಸಲು ಕಾರಣ ನಮ್ಮ ಆಸೆಗಳು. ಪಕ್ಕದ ಮನೆಯವರು ಕಾರು ತಂದಿದ್ದಾರೆ ಅಂತ ಅಂದುಕೊಳ್ಳುವುದಿದೆಯಲ್ಲ ಅದು ತುಂಬಾ ಅಪಾಯಕಾರಿ. ಅವರಂತೆ ನಾವಿರಬೇಕು ಅಂತ ಬಯಸಿದರೆ ಅದು ತಪ್ಪಲ್ಲ ಅವರ ಹಾಗೆ ನಾವಿಲ್ಲವಲ್ಲ ಅಂತ ಅನಿಸೋಕೆ ಶುರುವಾದರೆ ನಿಮ್ಮ ನೆಮ್ಮದಿಗೆ ಕೊಳ್ಳಿ ಇಟ್ಟುಕೊಂಡಂತೆಯೇ! ಬದುಕಿನ ಬಗ್ಗೆ ನಿರಾಸೆ ಯಾಕೆ? ನೀವು ಮಾಡಲು ಸಾಧ್ಯವಾಗದ್ದನ್ನು ನಿಮ್ಮ ಮಕ್ಕಳು ಮಾಡಬಹುದು. ಅವಸರ ಯಾಕೆ? ಸಾವು ಎಲ್ಲದಕ್ಕೂ ಪರಿಹಾರವಲ್ಲ. ಅದು ನಿಮಗೊಂದು ಅನುಕಂಪವನ್ನು, ಅಯ್ಯೋ ಪಾಪವನ್ನು ಮಾತ್ರ ದೊರಕಿಸಿಕೊಟ್ಟು ಮರೆತು ಬಿಡುತ್ತದೆ. ಬದುಕಿದ್ದಷ್ಟು ದಿನ ಸ್ವಾಭಿಮಾನಿಗಳಾಗಿ ಯಾರ ಅನುಕಂಪವನ್ನು ನಿರೀಕ್ಷಿಸದ ನೀವು ಸಾವು ತಂದುಕೊಂಡು ಯಾಕೆ ಹಾಳು ಸಮಾಜದ ಅನುಕಂಪ ಗಿಟ್ಟಿಸಿಕೊಳ್ಳುತ್ತೀರಿ? ಕೊಂಚ ಗಮನಿಸಿ ನೋಡಿ ಈ ಜಗತ್ತು ಕಷ್ಟಪಟ್ಟು ಬದುಕಿದವರು ಸದಾಕಾಲ ನೆನಪಿಟ್ಟುಕೊಳ್ಳುತ್ತದೆ. ರಾಮ, ಲಕ್ಷ್ಮಣ, ಭರತ, ಶತ್ರುಘ್ನರಲ್ಲಿ ನಮಗೆ ಹೆಚ್ಚು ನೆನಪಿರುವುದು ವನವಾಸಕ್ಕೆ ತೆರಳಿದ ರಾಮಲಕ್ಷ್ಮಣ ಮಾತ್ರ! ಧರ್ಮರಾಯನ ದಕ್ಷತೆ, ಧರ್ಮನಿಷ್ಠೆಯ ಪರಿಚಯವಾಗಿರುವುದು ಅವರು ರಾಜ್ಯವನ್ನೂ ತೊರೆದು ಕಷ್ಟದಿಂದ ಅಲೆದಾಡಿದ್ದರಿಂದ ತಾನೆ! ಇನ್ನೂ ಸತ್ಯಹರಿಶ್ಚಂದ್ರನ ಕುರಿತು ನಮಗೆ ಹೆಮ್ಮೆ ಯಾಕೆ ಹೇಳಿ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಆತ ಎದೆಗುಂದಲಿಲ್ಲ. ಸದಾ ಬೆನ್ನತ್ತಿ ಬಂದ ನಕ್ಷತ್ರಿಕನ ಕಾಟವನ್ನು ಸಹಿಸಿಕೊಂಡೇ ಬದುಕಿದ. ಅಂದು ಅವನು ಹಾಗೆ ಬದುಕಿದ್ದರಿಂದಲೇ ಅಲ್ವಾ ನಾವಿವತ್ತು ಆತನನ್ನು ನೆನಪಿಟ್ಟುಕೊಂಡಿರೋದು. ನಿಮ್ಮ ಬದುಕಿನಲ್ಲೂ ಹಾಗೆ ಕಾಡುವ ನಕ್ಷತ್ರಿಕರು ಇರುತ್ತಾರೆ. ಅವರಿಗೆ ಹೆದರದಿರಿ. ಬದುಕು ನಿಮ್ಮದು. ಬಾಲ್ಯದಲ್ಲಿ ಅಜ್ಜಿ ಹೇಳಿದ ಬಹುತೇಕ ಎಲ್ಲಾ ಕತೆಗಳಲ್ಲಿಯೂ ರಾಜ ಕೊನೆಗೆ ಸುಖವಾಗಿ ರಾಜ್ಯಭಾರ ಮಾಡಿದ ಅಂತ ಹೇಳಿ ಮುಗಿಸುತ್ತಿದ್ದರು. ಅಂದರೆ ನಮ್ಮ ಜೀವನವು ಹಾಗೆ. ಸುಖ ಎಂಬುದು ಕೊನೆಗೊಮ್ಮೆ ಸಿಗುತ್ತದೆ. ಹಾಗೆ ಸುಖ ಸಿಕ್ಕ ಮೇಲೆ ನಾವು ಯಾರಿಗೂ ನೆನಪಾಗುವುದಿಲ್ಲ. ಆದರೆ ನಾವು ಮಾತ್ರ ಯಾರನ್ನೂ ಮರೆಯಬಾರದು ಏನಂತೀರಿ?







