
ಚಿಕ್ಕಮಗಳೂರು: ಕಡೂರು ತಾಲೂಕಿನ ಬುಕ್ಕಸಾಗರ ಗೇಟ್ ಬಳಿ ತಡರಾತ್ರಿ ಥಾರ್ ಜೀಪ್ ಹಾಗೂ ಫೋರ್ಡ್ ಕಾರಿನ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಮೆಸ್ಕಾಂ ಜೆಇ ಆಗಿ ಕೆಲಸ ಮಾಡುತ್ತಿದ್ದ ಸನತ್ ಅಲಿಯಾಸ್ ಚನ್ನಪ್ಪ (49) ಎಂದು ಗುರುತಿಸಲಾಗಿದೆ. ಸನತ್ ಅವರು ಕಡೂರಿನಿಂದ ಚಿಕ್ಕಮಗಳೂರಿನ ಕಡೆಗೆ ಫೋರ್ಡ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಥಾರ್ ಜೀಪ್ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಸನತ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಥಾರ್ ಜೀಪ್ನಲ್ಲಿದ್ದ ಮಂಜುಳಾ, ಸ್ವಾತಿ ಹಾಗೂ ಸೋಮೇಶ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





