
ಚಿಕ್ಕಮಗಳೂರು: ನಿವೃತ್ತ ಯೋಧರೊಬ್ಬರ ಜಾತಿ ದೃಢೀಕರಣ ಪತ್ರದ ಅರ್ಜಿಯನ್ನು ತಿರಸ್ಕರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೊಪ್ಪ ತಾಲೂಕಿನ ಪುರಭವನದಲ್ಲಿ ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಹರಂದೂರು ಗ್ರಾಮ ಲೆಕ್ಕಾಧಿಕಾರಿ ನೇಸರ್ ಅವರು ಮಾಜಿ ಯೋಧರ ಜಾತಿ ಪ್ರಮಾಣ ಪತ್ರದ ಅರ್ಜಿಯನ್ನು ತಿರಸ್ಕರಿಸಿದ್ದಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರ್ಜಿ ತಿರಸ್ಕರಿಸಿದ್ದಕ್ಕೆ ಕಾರಣವೇನು ಎಂದು ಪ್ರಶ್ನಿಸಿ ಅಧಿಕಾರಿಯನ್ನು ಕಾಂಗ್ರೆಸ್ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದು, ಇದೇ ವೇಳೆ ಲಂಚ ಪಡೆಯಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದ ಶಾಸಕ ರಾಜೇಗೌಡ, ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೋಳ್ಳಿ ಕೂಡ ಗ್ರಾಮ ಲೆಕ್ಕಾಧಿಕಾರಿ ನೇಸರ್ ಅವರಿಗೆ ಸಾಲು-ಸಾಲು ಪ್ರಶ್ನೆಗಳನ್ನು ಕೇಳಿದ್ದು, ಈ ವೇಳೆ ತಹಶೀಲ್ದಾರ್ ಎದುರಲ್ಲೇ ಗ್ರಾಮ ಲೆಕ್ಕಾಧಿಕಾರಿ ನೇಸರ್ ಅವರು, “ನನ್ನನ್ನು ಸಸ್ಪೆಂಡ್ ಮಾಡಿ” ಎಂದು ಹೇಳಿ ವೇದಿಕೆಯಿಂದ ಹೊರನಡೆದಿದ್ದಾರೆ.ಕೊಪ್ಪ ಪಟ್ಟಣದ ಪುರಭವನದಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ನಡೆದ ಈ ಬೆಳವಣಿಗೆ ಕೆಲಕಾಲ ಕೋಲಾಹಲಕ್ಕೆ ಕಾರಣವಾಗಿದ್ದು, ಅಧಿಕಾರಿಯ ಈ ವರ್ತನೆಗೆ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕರ್ತವ್ಯಲೋಪ ಎಸಗಿದ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.




