
ಶೃಂಗೇರಿ: ತಾಲೂಕಿನ ಮುಳ್ಳೊಳ್ಳಿ ಅಗ್ರಹಾರದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಾಲಯದ ಮೇಲ್ಚಾವಣಿ ಕಾಮಗಾರಿಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಮಂಜೂರಾದ ಐದು ಲಕ್ಷ ರೂಪಾಯಿ ಸಹಾಯಧನದ ಡಿಡಿಯನ್ನು ಕರ್ಣಾಟಕ ಬ್ಯಾಂಕ್ನ ಎಜಿಎಂ ವಸಂತಕುಮಾರ್ ಅವರು ಬುಧವಾರ ದೇವಸ್ಥಾನಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಡಿಜಿಎಂ ಸಂಜೀವ ಕುಲಕರ್ಣಿ, ಹರಿಹರಪುರ ಹಾಗೂ ಕೆಳಕೊಪ್ಪ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು. ದೇವಾಲಯ ಸಮಿತಿಯ ಅಧ್ಯಕ್ಷ ಕೆ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಎಜಿಎಂ ವಸಂತಕುಮಾರ್ ಶಿಲಾಫಲಕವನ್ನು ಅನಾವರಣಗೊಳಿಸಿದರು. ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ ಕಾರಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕ್ಷೇತ್ರದ ಜನತೆ ಮತ್ತು ಕರ್ಣಾಟಕ ಬ್ಯಾಂಕ್ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿ ಸರ್ವರನ್ನು ಸ್ವಾಗತಿಸಿದರು. ವೇದಬ್ರಹ್ಮ ಶ್ರೀ ರವಿಚಂದ್ರ ಭಟ್ ಹಾಗೂ ವೇದಬ್ರಹ್ಮ ಶ್ರೀ ಸುಬ್ರಹ್ಮಣ್ಯ ಭಟ್ ಅವರ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, ಶ್ರೀಮತಿ ಪ್ರೇಮಾ ವೆಂಕಟೇಶ್ ಮತ್ತು ಸಂಗಡಿಗರು ದೇವತಾ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕೆರೆಕೊಡಿಗೆ ಶಶಿಶೇಖರ್ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಬ್ಯಾಂಕ್ ಅಧಿಕಾರಿಗಳನ್ನು ದೇವಾಲಯ ಸಮಿತಿಯ ವತಿಯಿಂದ ಹೃತ್ಪೂರ್ವಕವಾಗಿ ಗೌರವಿಸಲಾಯಿತು.




