ದೆಹಲಿ: ದೇಶದ 14ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ರಾಮ್ನಾಥ್ ಕೋವಿಂದ್ ಅವರ ಜೀವನಾಧಾರಿತ ಆತ್ಮಕಥೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕಾನ್ಪುರ ದೇಹತ್ನ ಸಾಮಾನ್ಯ ಕುಟುಂಬದಿಂದ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಏರಿದ ಕೋವಿಂದ್ ಅವರ ಜೀವನಯಾನವು ಭಾರತದ ಯುವಜನತೆಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಹೇಳಿದರು. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದರೂ, ಆ ನೋವನ್ನು ಶಕ್ತಿಯನ್ನಾಗಿ ಮಾಡಿಕೊಂಡು ರಾಮ್ನಾಥ್ ಕೋವಿಂದ್ ಅವರು ಜೀವನದಲ್ಲಿ ಮುನ್ನಡೆದರು. ಅವರ ತಂದೆಯೂ ಜೀವನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಪ್ರಧಾನಿ ಮೋದಿ ಸ್ಮರಿಸಿದರು. ರಾಷ್ಟ್ರಪತಿಯಾದ ಬಳಿಕವೂ ಕೋವಿಂದ್ ಅವರು ತಮ್ಮ ಸರಳತೆ ಮತ್ತು ವಿನಮ್ರತೆಯನ್ನು ಕಾಪಾಡಿಕೊಂಡಿದ್ದರು. ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದರೂ ತಮ್ಮ ಮೂಲವನ್ನು ಮರೆಯದ ಅವರ ಗುಣವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಈ ಆತ್ಮಕಥೆ ಯುವಸಮುದಾಯಕ್ಕೆ ಜೀವನದ ಮೌಲ್ಯಗಳು, ಪರಿಶ್ರಮ ಮತ್ತು ಸಾಧನೆಯ ಕುರಿತು ಮಹತ್ವದ ಸಂದೇಶ ನೀಡಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
