
ಚಿಕ್ಕಮಗಳೂರು: ಜಮೀನು ವಿವಾದದ ಹಿನ್ನೆಲೆಯಲ್ಲಿ ತೋಟಕ್ಕೆ ನುಗ್ಗಿ ತಂತಿಬೇಲಿ ಕಂಬಗಳು ಹಾಗೂ ಕಾಫಿ ಗಿಡಗಳನ್ನು ನಾಶಪಡಿಸಿ, ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಆಲದಗುಡ್ಡೆ ಗ್ರಾಮದಲ್ಲಿ ಘಟನೆ ನಡೆದಿದೆ. ಸವಿತಾ.ಕೆ.ಟಿ. ಎಂಬುವವರು ನೀಡಿದ ದೂರಿನ ಪ್ರಕಾರ, ಆಗಸ್ಟ್ 9ರಂದು ಮಧ್ಯಾಹ್ನ ಮೋಹನ ಮತ್ತು ನಿಖಿಲ್ ಎಂಬುವವರು ತಮ್ಮ ತೋಟದ ಸರ್ವೆ ನಂಬರ್ 56/4ಕ್ಕೆ ಏಕಾಏಕಿ ಪ್ರವೇಶಿಸಿ, ಬಾಂದ್ ಕಲ್ಲು ಹಾಗೂ ಕಲ್ಲುಕಂಬಗಳನ್ನು ಕಿತ್ತು ತಂತಿಬೇಲಿಯನ್ನು ನಾಶಪಡಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ತೋಟದಲ್ಲಿದ್ದ ಕಾಫಿ ಗಿಡಗಳು ಹಾಗೂ ಹಾಲವಣ ಗಿಡಗಳನ್ನು ಕಿತ್ತು ಹಾಕಿ ಸುಮಾರು 5 ಸಾವಿರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಜಮೀನು ಈಗಾಗಲೇ ವಿವಾದದಲ್ಲಿದ್ದು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ ಎಂದು ಸವಿತಾ ತಿಳಿಸಿದ್ದಾರೆ. ಘಟನೆ ವೇಳೆ ತಾವು ತೋಟದಲ್ಲಿ ಕೆಲಸ ಮಾಡುತ್ತಿದ್ದುದಾಗಿ ಹಾಗೂ ತಮ್ಮ ಸಮ್ಮುಖದಲ್ಲೇ ಗಿಡಗಳು ಮತ್ತು ಬೇಲಿ ನಾಶಪಡಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಮೀಪದ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಸಾಧ್ಯತೆಯಿದೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ, ಆರೋಪಿಗಳಿಂದ ತೋಟದಲ್ಲಿ ಕೆಲಸ ಮಾಡಲು ಭಯವಾಗುತ್ತಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಆಲ್ದೂರು ಪೊಲೀಸರು ಮೊ.ನಂ. 160/2026 ದಾಖಲಿಸಿಕೊಂಡು, BNS ಕಲಂ 329(3), 324(2) ಸಹಿತ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.




