
ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬೆಳವಣಿಗೆಯಿಂದ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿರುವ ಯುವಜನತೆಗೆ ಆಶಾದಾಯಕ ಸುದ್ದಿಯೊಂದು ಹೊರಬಿದ್ದಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕೌಶಲ್ಯ ಮಂಡಳಿ (THSC) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಭಾರತದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವು ಮುಂಬರುವ ವರ್ಷಗಳಲ್ಲಿ ಬೃಹತ್ ಉದ್ಯೋಗ ಕ್ರಾಂತಿಗೆ ಸಾಕ್ಷಿಯಾಗಲಿದ್ದು, 2028ರ ವೇಳೆಗೆ ಸುಮಾರು 30 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದ ಈ ವಲಯದಲ್ಲಿನ ಒಟ್ಟು ಉದ್ಯೋಗಿಗಳ ಸಂಖ್ಯೆ 2024ರ ವೇಳೆಗೆ ಇದ್ದ 1.18 ಕೋಟಿಯಿಂದ 2028ರ ವೇಳೆಗೆ 1.48 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಭಾರತೀಯ ಆರ್ಥಿಕತೆಯ ಬೆಳವಣಿಗೆಯಲ್ಲಿ ಪ್ರವಾಸೋದ್ಯಮ ವಲಯವು ನಿರ್ಣಾಯಕ ಪಾತ್ರ ವಹಿಸಲಿದ್ದು, ವಿಶೇಷವಾಗಿ ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಆಹಾರ ಸೇವಾ ವಿಭಾಗಗಳಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಕೌಶಲ್ಯಪೂರ್ಣ (Skilled), ಅರೆ-ಕೌಶಲ್ಯಪೂರ್ಣ (Semi-skilled) ಹಾಗೂ ಆರಂಭಿಕ ಹಂತದ (Entry-level) ಅಭ್ಯರ್ಥಿಗಳಿಗೂ ಸಮಾನ ಅವಕಾಶಗಳು ಲಭ್ಯವಿದ್ದು, ಹೊಸಬರಿಗೂ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳುವ ಜೊತೆಗೆ ಆಕರ್ಷಕ ಸಂಬಳದ ಅವಕಾಶಗಳು ದೊರೆಯಲಿವೆ ಎಂದು ವರದಿ ತಿಳಿಸಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದಲ್ಲಿ ವಸತಿ ಮತ್ತು ಆಹಾರ ಸೇವೆಗಳೇ ಒಟ್ಟು ಉದ್ಯೋಗಗಳಲ್ಲಿ ಶೇ.93ರಷ್ಟು ಪಾಲು ಹೊಂದಿದ್ದು, ಸೃಷ್ಟಿಯಾಗುವ ಪ್ರತಿ 10 ಹೊಸ ಉದ್ಯೋಗಗಳಲ್ಲಿ 9 ಉದ್ಯೋಗಗಳು ಹೋಟೆಲ್ಗಳು, ರೆಸ್ಟೋರೆಂಟ್ಗಳು, ಕೆಫೆಗಳು, ರೆಸಾರ್ಟ್ಗಳು ಹಾಗೂ ಇತರ ಆಹಾರ ಸೇವಾ ಸಂಸ್ಥೆಗಳಲ್ಲೇ ಲಭ್ಯವಾಗಲಿವೆ. ರಾಜ್ಯವಾರು ನೋಡಿದರೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳು ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ರಾಜ್ಯಗಳಾಗಿ ಮುಂಚೂಣಿಯಲ್ಲಿವೆ ಎಂದು THSC ವರದಿ ತಿಳಿಸಿದೆ.




