
ಕಾರ್ಕಳ: ಕ್ರಿಯೇಟಿವ್ ಪುಸ್ತಕ ಮನೆ ವತಿಯಿಂದ ಆಯೋಜಿಸಿರುವ ‘ಕ್ರಿಯೇಟಿವ್ ಪುಸ್ತಕಧಾರೆ–3’ ಕಾರ್ಯಕ್ರಮ ಜುಲೈ 19ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು, ವಿವಿಧ ಲೇಖಕರ 25 ಕನ್ನಡ ಕೃತಿಗಳು ಲೋಕಾರ್ಪಣೆಯಾಗಲಿವೆ ಎಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಅಶ್ವಥ್ ಎಸ್.ಎಲ್. ತಿಳಿಸಿದ್ದಾರೆ. ಬುಧವಾರ ಕಾರ್ಕಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕ್ರಿಯೇಟಿವ್ ಪುಸ್ತಕ ಮನೆ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳ ಪ್ರಕಟಣೆ ಹಾಗೂ ನಾಡಿನ ಸಾಹಿತಿಗಳು, ಬರಹಗಾರರು, ಚಿಂತಕರು ಮತ್ತು ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಈ ವರ್ಷದ ಮೂರನೇ ಆವೃತ್ತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಅಜಿತ್ ಅನು ಮಕ್ಕನವರ್ ಅತಿಥಿಯಾಗಿ ಭಾಗವಹಿಸಲಿದ್ದು, ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್, ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಧನಂಜಯ ಕುಂಬಳೆ ಸೇರಿದಂತೆ ರಾಜ್ಯದ ಹಿರಿಯ ಸಾಹಿತಿಗಳು, ಬರಹಗಾರರು ಹಾಗೂ ಸಾಹಿತ್ಯಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಹೊಸ ಪಟ್ಟಣ, ಖ್ಯಾತ ಶಿಕ್ಷಣ ಸಿದ್ಧಾಂತಗಳು, ಪಿಯೂಷಾಮೃತ, ಸುಭಾಷಿತ ಸಾಗರ, ಬದುಕಿನ ಕನ್ನಡಿಯಲ್ಲಿ, ಭಾವಮುದ್ರೆ, ದೇವಯಾನ, ತರ್ಕಕ್ಕೆ ನಿಲುಕದ್ದು, ಸಮುದ್ರ ಮಾತನಾತು, ನಿತ್ಯದ ನೋಟಗಳಿಗೆ, ನಿರುತ್ತರ, ಅಪ್ಪನ ಅಂಗಡಿ, ಚಿಗುರು ಚಿವುಟಿದ ಫೇಸ್ಬುಕ್, ಗೆಲುವಿನ ದಾರಿ, ನದಿಯಂಚಿನ ನಡಿಗೆ, ಜನ, ಜಂದವನ ಕಡಿದು ತೊಡೆದು, ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು, ಮೌನ, ಈ ಮಳೆಬಿಲ್ಲು, ನಂಬಿಕೆ, ಗೆಲುವಿನ ಏಣಿ, ಅಂತರಂಗ ಯಾನ, ಮೌಲ್ಯದ ಅರಿವಿನ ಹೊಂಬೆಳಕು, ನೀಲಿ, ಒಲವೇ ಹಾಡಾಗಿದೆ, ಸಾಹಿತ್ಯ ವಿಸ್ಮಯ ಹಾಗೂ ರಣರಂಗ ಸೇರಿದಂತೆ ಒಟ್ಟು 25 ಕೃತಿಗಳು ಬಿಡುಗಡೆಯಾಗಲಿವೆ ಎಂದು ತಿಳಿಸಿದರು. ಇದೇ ವೇಳೆ ರಾಜ್ಯಮಟ್ಟದ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿಯನ್ನು ಕುಂದಾಪುರದ ಲೇಖಕ ಶಶಿಧರ ಹಾಲಾಡಿ ಅವರ ನದಿ ದಾಟಿ ಬಂದವರು ಕೃತಿಗೆ ಪ್ರದಾನ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾದಂಬರಿಕಾರ ಅನುಬೆಳ್ಳೆ, ಪ್ರಮುಖರಾದ ಚಂದ್ರಕಾಂತ ಹಾಗೂ ನವೀನ್ ನಾಯಕ್ ಉಪಸ್ಥಿತರಿದ್ದರು.
ವರದಿ: ಅರುಣ್ ಭಟ್ ಕಾರ್ಕಳ




