
ಕಾರ್ಕಳ: ಕಾರ್ಕಳ ಎಸ್ಕೆ ಬಾರ್ಡರ್ ಮೂಲಕ ಕಳಸ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಜುಲೈ 15ರಂದು ತೀರ್ಥಹಳ್ಳಿ–ಉಡುಪಿ ರಾಜ್ಯ ಹೆದ್ದಾರಿ 27ರ ಆಗುಂಬೆ ಘಾಟಿ ವೀಕ್ಷಣೆಗೆ ಆಗಮಿಸಿದ ವೇಳೆ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಕಳದಿಂದ ಮಾಳ, ಎಸ್ಕೆ ಬಾರ್ಡರ್, ಮೂಡಿಗೆರೆ ಮಾರ್ಗವಾಗಿ ಕಳಸ ಸಂಪರ್ಕಿಸುವ ರಸ್ತೆ ದುರಸ್ತಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು. ಕಾರ್ಕಳ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, “ಅನುದಾನವಿಲ್ಲದೆ ಕಾಯಿ ಒಡೆದು ಗುದ್ದಲಿ ಪೂಜೆ ನಡೆದಿದೆಯೇ? ಅದು ರಾಜಕೀಯ ಹೇಳಿಕೆ. ನಮ್ಮ ಶಾಸಕರಿರುವ ಕ್ಷೇತ್ರಗಳಿಗೆ ಹೆಚ್ಚು, ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡಲಾಗಿದೆ. ನಾವು ಶಾಸಕರಾಗಿದ್ದಾಗ ನಮಗೂ ಅವರು ಅನುದಾನ ನೀಡಿರಲಿಲ್ಲ” ಎಂದು ಹೇಳಿದರು. 2027ರಲ್ಲಿ ನಡೆಯಲಿರುವ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ ಕುರಿತು ಮಾತನಾಡಿದ ಅವರು, ಇದು ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ಸರ್ಕಾರ ಅನುದಾನ ನೀಡುವುದು ಖಚಿತ. ಹಿಂದಿನ ಸರ್ಕಾರಗಳು ಹೇಗೆ ನೆರವು ನೀಡಿದ್ದವೋ, ನಮ್ಮ ಸರ್ಕಾರವೂ ಅದೇ ರೀತಿಯಲ್ಲಿ ಮಹಾಮಸ್ತಕಾಭಿಷೇಕವನ್ನು ನಡೆಸಲಿದೆ ಎಂದು ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷೆ ಹಾಗೂ ಪಕ್ಷದ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, “ಯಾರೇ ಆಗಲಿ ನಮ್ಮವರೇ, ಎಲ್ಲರೂ ಸೇರಿ ಕಾರ್ಯನಿರ್ವಹಿಸುತ್ತೇವೆ” ಎಂದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, “ಆದಷ್ಟು ಬೇಗ ಆಗಬೇಕೆಂಬುದು ನಮ್ಮ ಆಶಯ. ಇನ್ನೆರಡು–ಮೂರು ದಿನಗಳಲ್ಲಿ ಆಗುವ ಸಾಧ್ಯತೆ ಇದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಕಾಂಗ್ರೆಸ್ ಮುಖಂಡರಾದ ರಕ್ಷಿತ್ ಶಿವರಾಂ, ಉದಯ ಶೆಟ್ಟಿ ಮುನಿಯಾಲು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ಪುರಸಭೆಯ ಮಾಜಿ ಅಧ್ಯಕ್ಷರಾದ ಸುಭಿತ್ ಎನ್.ಆರ್., ಪ್ರತಿಮಾ ರಾಣೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನುಭಾಸ್ಕರ್, ಮಾಲಿನಿ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಳಿಕ ಸಚಿವರು ಇಲಾಖಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.
ವರದಿ: ಅರುಣ್ ಭಟ್ ಕಾರ್ಕಳ




