
ಮೂಡಿಗೆರೆ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ 2026–27ನೇ ಸಾಲಿನ ಮುಂಗಾರು ಹಂಗಾಮಿನಡಿ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಅಧಿಸೂಚನೆ ಹೊರಡಿಸಲಾಗಿದ್ದು, ಭತ್ತದ ಬೆಳೆಗೆ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದಲ್ಲಿ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಲ್ಲಿದ್ದು, ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಇಬ್ಬರೂ ಬೆಳೆ ವಿಮೆ ಮಾಡಿಸಿಕೊಳ್ಳಬಹುದು. ವಿಮಾ ಕಂತು ಪಾವತಿಸಲು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಪಹಣಿ ಹಾಗೂ ಬ್ಯಾಂಕ್ ಪಾಸ್ಬುಕ್ ದಾಖಲಾತಿಗಳನ್ನು ಸಲ್ಲಿಸಿ ಹತ್ತಿರದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಗ್ರಾಮ್ ಒನ್ ಕೇಂದ್ರಗಳಲ್ಲಿ ನಿಗದಿತ ವಿಮಾ ಕಂತು ಪಾವತಿಸಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಬೆಳೆ ವಿಮೆಗೆ ನೋಂದಾಯಿಸಲು 2026ರ ಆಗಸ್ಟ್ 14 ಕೊನೆಯ ದಿನಾಂಕವಾಗಿದ್ದು, ರೈತರು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಮೂಡಿಗೆರೆ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ಮೂಡಿಗೆರೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.




