
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಳೆದ 72 ವರ್ಷಗಳಿಂದ ರುಚಿಕರ, ಶುಚಿ ಹಾಗೂ ಗುಣಮಟ್ಟದ ಬೇಕರಿ ಪದಾರ್ಥಗಳನ್ನು ಜನತೆಗೆ ಒದಗಿಸುತ್ತಾ ಅಪಾರ ವಿಶ್ವಾಸ ಗಳಿಸಿರುವ ಶ್ರೀ ವೆಂಕಟೇಶ್ವರ ಬೇಕರಿ ಇಂದು (ಜು.12) ನವೀಕರಣದೊಂದಿಗೆ ಪುನರಾರಂಭಗೊಂಡಿದೆ. 1954ರಲ್ಲಿ ದೊಡ್ಡ ಅಂಗಡಿ ಬೀದಿಯಲ್ಲಿ ವೈ.ವಿ. ವೆಂಕಟ ವರದಾಚಾರ್ಯ ಅವರು ಈ ಬೇಕರಿಯನ್ನು ಸ್ಥಾಪಿಸಿದ್ದು, ಏಳು ದಶಕಗಳಿಂದ ಚಾಮರಾಜನಗರದ ಜನತೆಗೆ ಮಾತ್ರವಲ್ಲದೆ ದೇಶ-ವಿದೇಶಗಳಿಗೂ ತನ್ನ ವಿಶೇಷ ಬೇಕರಿ ಪದಾರ್ಥಗಳನ್ನು ಪೂರೈಸುತ್ತಾ ಗ್ರಾಹಕರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿದೆ. ವೆಂಕಟ ರಂಗ ಅಯ್ಯಂಗಾರ್ ಅವರ ಪುತ್ರರಾದ ವೆಂಕಟ ವರದಾಚಾರ್ಯರು ಬಾಲ್ಯದಲ್ಲೇ ಕುಟುಂಬದ ಜವಾಬ್ದಾರಿ ಹೊತ್ತು ಸಂಸ್ಕೃತ ವಿದ್ಯಾಭ್ಯಾಸವನ್ನು ತೊರೆದು ಯಾವುದೇ ಸಂಭಾವನೆ ಇಲ್ಲದೆ ಬೇಕರಿ ಕೆಲಸ ಕಲಿತು ತಮ್ಮ ವಿಶಿಷ್ಟ ಕೈಚಳಕದಿಂದ ಗರಗ ರೊಟ್ಟಿ, ಖಾರದ ರೊಟ್ಟಿ, ಬ್ರೆಡ್, ರಸ್ಕ್, ಖಾರ ಬನ್, ಕೊಬ್ಬರಿ ಬಿಸ್ಕತ್, ಬೆಣ್ಣೆ ಬಿಸ್ಕತ್, ಓಂ ಬಿಸ್ಕತ್, ಸಾಲ್ಟ್ ಬಿಸ್ಕತ್, ಹುರುಗಾಳು, ಬೂಂದಿ ಸೇರಿದಂತೆ ಅನೇಕ ಪದಾರ್ಥಗಳಿಗೆ ಜನಪ್ರಿಯತೆ ತಂದುಕೊಟ್ಟರು. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲೂ ಇಲ್ಲಿನ ಖಾರದ ರೊಟ್ಟಿಗೆ ಅಭಿಮಾನಿಗಳಿದ್ದು, ಕಾಲಕ್ಕೆ ತಕ್ಕಂತೆ ವಿವಿಧ ಕೇಕ್ಗಳು, ಟೋಸ್ಟ್, ದಿಲ್ ಪಸಂದ್, ಪಫ್ಸ್, ಬ್ರೆಡ್ ರೋಸ್ಟ್, ಡೋನಟ್ಸ್ ಹಾಗೂ ಕಪ್ ಕೇಕ್ಗಳನ್ನೂ ಪರಿಚಯಿಸಲಾಗಿದೆ. ಆರಂಭಿಕ ದಿನಗಳಲ್ಲಿ ಸೌದೆ ಒಲೆಯಲ್ಲಿ ಬೆಳಗಿನ ಜಾವದಿಂದಲೇ ಭಕ್ತಿಭಾವದಿಂದ ಕೈಯಿಂದಲೇ ಹದಗೊಳಿಸಿ ಪದಾರ್ಥಗಳನ್ನು ತಯಾರಿಸಲಾಗುತ್ತಿದ್ದು, 1958–60ರ ಅವಧಿಯಲ್ಲಿ ನಗರದಲ್ಲಿ ಜ್ವರ ಹರಡಿದ ಸಂದರ್ಭದಲ್ಲಿ ಅಂದಿನ ಖ್ಯಾತ ವೈದ್ಯರ ಸಲಹೆ ಮೇರೆಗೆ ಬಡವರಿಗೆ ಉಚಿತವಾಗಿ ಬ್ರೆಡ್ ಮತ್ತು ಬನ್ ವಿತರಿಸಿದ ಸೇವೆಯನ್ನೂ ಜನರು ಇಂದಿಗೂ ಸ್ಮರಿಸುತ್ತಾರೆ. ಇದೀಗ ಮಾಲೀಕರಾದ ವೆಂಕಟೇಶ್ ಹಾಗೂ ಬದ್ರಿ ನಾರಾಯಣ್ ಅವರ ನೇತೃತ್ವದಲ್ಲಿ ನವೀಕೃತ ರೂಪದಲ್ಲಿ ಮತ್ತೆ ಆರಂಭವಾಗಿರುವ ಶ್ರೀ ವೆಂಕಟೇಶ್ವರ ಬೇಕರಿ ಗುಣಮಟ್ಟ, ಶುಚಿತ್ವ ಹಾಗೂ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು 75ನೇ ವಸಂತದತ್ತ ಹೆಜ್ಜೆಯಿಡುತ್ತಿದ್ದು, ಚಾಮರಾಜನಗರದ ಜನರ ನೆಚ್ಚಿನ ಬೇಕರಿಯಾಗಿ ಮತ್ತಷ್ಟು ಯಶಸ್ಸು ಕಾಣಲಿ ಎಂಬ ಹಾರೈಕೆಗಳು ವ್ಯಕ್ತವಾಗಿವೆ. ಈ ಕುರಿತು ಲೇಖಕ ಹಾಗೂ ಕಸಾಪ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಅವರು ತಮ್ಮ ಲೇಖನದಲ್ಲಿ ಬೇಕರಿಯೊಂದಿಗಿನ ನಾಲ್ಕು ದಶಕಗಳ ನೆನಪುಗಳನ್ನು ಹಂಚಿಕೊಂಡು, ಅತಿಥಿ ಸತ್ಕಾರದಲ್ಲೂ ಶ್ರೀ ವೆಂಕಟೇಶ್ವರ ಬೇಕರಿಯ ಪದಾರ್ಥಗಳು ಅವಿಭಾಜ್ಯ ಅಂಗವಾಗಿದ್ದ ದಿನಗಳನ್ನು ಸ್ಮರಿಸಿದ್ದಾರೆ.




