
ಬೆಂಗಳೂರು: ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ರಾಜ್ಯಾದ್ಯಂತ ಆರಂಭವಾಗಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತಿಳಿಸಿದೆ. ಜುಲೈ 1ರಿಂದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆಗಾಗಿ ಮೀಟರ್ ರೀಡರ್ಗಳನ್ನು ನಿಯೋಜಿಸಿರುವ ಕಾರಣ, ಈ ತಿಂಗಳಲ್ಲಿ ಗ್ರಾಹಕರಿಗೆ ಸಾಮಾನ್ಯ ರೀತಿಯ ಮೀಟರ್ ರೀಡಿಂಗ್ ಆಧಾರಿತ ಬಿಲ್ ಬರುವುದಿಲ್ಲ. ಬದಲಾಗಿ ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು ಆಧಾರವಾಗಿಟ್ಟುಕೊಂಡು ಜುಲೈ ತಿಂಗಳ ವಿದ್ಯುತ್ ಬಿಲ್ ಸಿದ್ಧಪಡಿಸಿ ವಿತರಿಸಲಾಗುತ್ತದೆ ಎಂದು ಬೆಸ್ಕಾಂ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಗೃಹಜ್ಯೋತಿ ಯೋಜನೆಯಡಿ ಅನರ್ಹರು ಸೌಲಭ್ಯ ಪಡೆಯದಂತೆ ಫಲಾನುಭವಿಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಇದೇ ಕಾರಣಕ್ಕೆ ಈ ತಾತ್ಕಾಲಿಕ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ ಈ ನಿಯಮ ಎಲ್ಲ ಗ್ರಾಹಕರಿಗೂ ಅನ್ವಯಿಸುವುದಿಲ್ಲ. ಹೆಚ್.ಟಿ. (HT) ಗ್ರಾಹಕರು, 40 ಹೆಚ್.ಪಿ. ಮತ್ತು ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್.ಟಿ. (LT) ಗ್ರಾಹಕರು, ಸೋಲಾರ್ ರೂಫ್ಟಾಪ್ ಬಳಕೆದಾರರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಎಂದಿನಂತೆ ಮೀಟರ್ ರೀಡಿಂಗ್ ಮಾಡಿ ಬಿಲ್ ನೀಡಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ. ಹೀಗಾಗಿ ಜುಲೈ ತಿಂಗಳಲ್ಲಿ ವಿದ್ಯುತ್ ಬಿಲ್ ಸಂಪೂರ್ಣ ರದ್ದಾಗುವುದಿಲ್ಲ, ಸಾಮಾನ್ಯ ಗ್ರಾಹಕರಿಗೆ ಮಾತ್ರ ಕಳೆದ ಮೂರು ತಿಂಗಳ ಸರಾಸರಿ ಬಳಕೆಯ ಆಧಾರದ ಮೇಲೆ ಬಿಲ್ ನೀಡಲಾಗುತ್ತದೆ.




