
ಚಿಕ್ಕಮಗಳೂರು: ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನ್ಯಾಯಾಲಯದ ಅಧಿಕೃತ ಇ-ಮೇಲ್ಗೆ ಬಂದ ಸಂದೇಶದಲ್ಲಿ ಮಧ್ಯಾಹ್ನ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ಕ್ವಾಡ್ ಸಹಾಯದಿಂದ ನ್ಯಾಯಾಲಯದ ಕಟ್ಟಡ ಮತ್ತು ಆವರಣದಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರು. ನ್ಯಾಯಾಲಯದ ಕಲಾಪಗಳು ನಡೆಯುತ್ತಿದ್ದ ನಡುವೆಯೇ ಭದ್ರತೆಯನ್ನು ಬಿಗಿಗೊಳಿಸಿ ಪರಿಶೀಲನೆ ಮುಂದುವರಿಸಲಾಗಿದ್ದು, ನಗರದ ಹೃದಯಭಾಗದಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




