
ನವದೆಹಲಿ: ಜಪಾನ್ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 3ರವರೆಗೆ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಿಗಾಗಿ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಬಲಿಷ್ಠ ತಂಡವನ್ನು ಅನುಭವಿ ಆಟಗಾರ್ತಿ ಹರ್ಮನ್ಪ್ರೀತ್ ಕೌರ್ ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿ ಜವಾಬ್ದಾರಿ ವಹಿಸಲಿದ್ದಾರೆ.
ಈ ಬಾರಿ ತಂಡದಲ್ಲಿ 17 ವರ್ಷದ ಯುವ ವಿಕೆಟ್ಕೀಪರ್-ಬ್ಯಾಟರ್ ಜಿ. ಕಮಲಿನಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಕಳೆದ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಭಾಗವಾಗಿದ್ದ ವಿಕೆಟ್ಕೀಪರ್ ಯಾಸ್ತಿಕಾ ಭಾಟಿಯಾ ಅವರಿಗೆ ಈ ಬಾರಿ ಅವಕಾಶ ದೊರೆತಿಲ್ಲ. ಅವರ ಸ್ಥಾನಕ್ಕೆ ಕಮಲಿನಿ ಆಯ್ಕೆಯಾಗಿದ್ದಾರೆ.
ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದ ಕರ್ನಾಟಕದ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಅವರಿಗೆ ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಅವರು ಟೂರ್ನಿಗೆ ಮುನ್ನ ಕಡ್ಡಾಯ ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಿದ್ದು, ಫಿಟ್ ಆಗದಿದ್ದರೆ ಅವರ ಬದಲಿಗೆ ಮತ್ತೊಬ್ಬ ಆಟಗಾರ್ತಿಯನ್ನು ಆಯ್ಕೆ ಮಾಡುವುದಾಗಿ ಆಯ್ಕೆ ಸಮಿತಿ ತಿಳಿಸಿದೆ.
ಭಾರತ ಮಹಿಳಾ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ಕೀಪರ್), ಜಿ. ಕಮಲಿನಿ (ವಿಕೆಟ್ಕೀಪರ್), ಭಾರತಿ ಫುಲ್ಮಾಲಿ, ಶ್ರೀ ಚರಣಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಂದಿನಿ ಶರ್ಮಾ ಹಾಗೂ ಶ್ರೇಯಾಂಕಾ ಪಾಟೀಲ್.
2026ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆತಿಥೇಯ ಜಪಾನ್ ನೇರವಾಗಿ ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆದಿದ್ದು, ಚೀನಾ, ಮಲೇಷ್ಯಾ ಹಾಗೂ ಥಾಯ್ಲೆಂಡ್ ತಂಡಗಳು ಅರ್ಹತಾ ಸುತ್ತಿನ ಮೂಲಕ ಟೂರ್ನಿಗೆ ಅರ್ಹತೆ ಪಡೆದಿವೆ.
ಭಾರತ ಮಹಿಳಾ ತಂಡವು ಸೆಪ್ಟೆಂಬರ್ 17ರಂದು ಕ್ವಾರ್ಟರ್ಫೈನಲ್ ಪಂದ್ಯದಿಂದ ತನ್ನ ಅಭಿಯಾನ ಆರಂಭಿಸಲಿದೆ. ಕ್ವಾಲಿಫೈಯರ್ ಸುತ್ತಿನಿಂದ ಬರುವ ಕಡಿಮೆ ಶ್ರೇಯಾಂಕದ ತಂಡಗಳಾದ ಥಾಯ್ಲೆಂಡ್, ಮಲೇಷ್ಯಾ ಅಥವಾ ಚೀನಾ ತಂಡಗಳಲ್ಲಿ ಒಂದರ ವಿರುದ್ಧ ಭಾರತ ಸೆಣಸುವ ಸಾಧ್ಯತೆ ಇದೆ.
ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಟಿ20 ಮಾದರಿಯಲ್ಲಿ ನಡೆಯಲಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ಗುರಿಯೊಂದಿಗೆ ಭಾರತ ಮಹಿಳಾ ತಂಡ ಕಣಕ್ಕಿಳಿಯಲಿದೆ.







