
ಬಣಕಲ್: ಡಾ. ಕೆ. ಮಧುಕರ್ ಶೆಟ್ಟಿ ಐಪಿಎಸ್ ಸಮಾಜ ಸೇವಾ ಸಂಘ (ರಿ.), ಗುಪ್ತಶೆಟ್ಟಿಹಳ್ಳಿ, ಅಲ್ದೂರು ಹೋಬಳಿ, ಚಿಕ್ಕಮಗಳೂರು ತಾಲ್ಲೂಕು ವತಿಯಿಂದ ಬಣಕಲ್ ಹೋಬಳಿಯ ದೊಡ್ಡನಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಿಕ್ಷಣ ಸಾಮಗ್ರಿ ವಿತರಣಾ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ 11.30ಕ್ಕೆ ಶಾಲೆಗೆ ಭೇಟಿ ನೀಡಿದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶಾಲಾ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಎಸ್ಡಿಎಂಸಿ ಸದಸ್ಯರು, ಶಿಕ್ಷಕರು, ಅಂಗನವಾಡಿ ಸಿಬ್ಬಂದಿ, ಗ್ರಾಮಸ್ಥರು ಮತ್ತು ಪೋಷಕರೊಂದಿಗೆ ಸಭೆ ನಡೆಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಮಾಜದ ಸಹಕಾರ ಅತ್ಯಗತ್ಯವಾಗಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪೆನ್ನು, ಪೆನ್ಸಿಲ್ ಹಾಗೂ ನೋಟ್ಬುಕ್ಗಳನ್ನು ವಿತರಿಸಿ ಶುಭ ಹಾರೈಸಲಾಯಿತು. ಅಲ್ಲದೆ, ಅಂಗನವಾಡಿ ಮಕ್ಕಳಿಗೆ ಸ್ಲೇಟ್ ಹಾಗೂ ಬಳಪಗಳನ್ನು ವಿತರಿಸುವ ಮೂಲಕ ಅವರ ಶಿಕ್ಷಣದ ಮೊದಲ ಹೆಜ್ಜೆಗೆ ಪ್ರೋತ್ಸಾಹ ನೀಡಲಾಯಿತು.
ಸಂಘದ ಅಧ್ಯಕ್ಷ ಬೈರಿಗದ್ದೆ ರಮೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀಕಂಠ ಬಿ.ಆರ್., ಪದಾಧಿಕಾರಿಗಳಾದ ಮಣಿಕಂಠ, ಕಿರಣ್ ಬಿ.ಆರ್., ಕುಮಾರ ಹಾಗೂ ಕಿಶೋರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಮಹೇಶ್, ಅಂಗನವಾಡಿ ಸಹಾಯಕಿ ಸುಮ, ಗ್ರಾಮಸ್ಥರಾದ ರಾಧಾ, ಪ್ರಶಾಂತಿ, ಶಾಂತ, ಸುನಿತಾ, ಚಿತ್ರ, ಅಶ್ವಿನಿ, ಸುಧಾ, ನಿಖಿಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘದ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ತಿಳಿಸಿ, ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಸಮಾಜಕ್ಕೆ ಮಾದರಿಯಾಗುವಂತೆ ಪ್ರೇರೇಪಿಸಲಾಯಿತು.





